ಉಡುಪಿ: ಇನ್ಮುಂದೆ ರಸ್ತೆ ಪಕ್ಕ ಮೀನು ಮಾರಾಟ ಮಾಡುವಂತಿಲ್ಲ

ಉಡುಪಿ: ಉಡುಪಿ ನಗರದಲ್ಲಿ ರಸ್ತೆ ಪಕ್ಕದಲ್ಲಿ ಮೀನು ಮಾರಾಟ ಮಾಡುವುದನ್ನು ನಿಷೇಧಿಸಿ ನಗರಸಭೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಇನ್ಮುಂದೆ ನಿಗದಿತ ಸ್ಥಳ ಹೊರತುಪಡಿಸಿ ರಸ್ತೆ ಪಕ್ಕ ಯಾರು ಮೀನು ಮಾರಾಟ ಮಾಡುವಂತಿಲ್ಲ.

ನಗರದ ಪ್ರಮುಖ ರಸ್ತೆಗಳಲ್ಲಿ ಮೀನುಗಾರ ಮಹಿಳೆಯರು ಕುಳಿತು ಮೀನು ಮಾರಾಟ ಮಾಡುವುದು ಬಹಳ ಹಿಂದಿನ ಪದ್ಧತಿಯಾಗಿದೆ. ಆದರೆ ಇದರಿಂದ ತೊಂದರೆಯಾಗುತ್ತಿದೆ ಸಾರ್ವಜನಿಕರಿಂದ ನಗರಸಭೆಗೆ ದೂರು ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಈ ಕ್ರಮಕೈಗೊಂಡಿದೆ.

ಕೆಲವು ಯುವಕರು ವಾಹನಗಳಲ್ಲಿ ಮೀನು ತುಂಬಿಕೊಂಡು ಬಂದು ನಗರದಲ್ಲಿ ಸಂಚರಿಸುತ್ತಾ ಮೀನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಮೀನುಗಾರ ಮಹಿಳೆಯರೇ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಯುವಕರಿಂದ ತಮ್ಮ ವೃತ್ತಿಗೆ ಧಕ್ಕೆಯಾಗುತ್ತಿದೆ ಎಂದು ನಗರಸಭೆಗೆ ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ನಿಗದಿತ ಮೀನು ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡಬೇಕು. ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಮೀನು ಮಾರಾಟ ಮಾಡಬಾರದು. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ.