ಉಡುಪಿ : 2020-21, 2021-22, 2022-23, 2023-24, 2024-25 ಹಾಗೂ 2025-26 ನೇ ಸಾಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿರುವ ಕೆಲವೊಂದು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಕೊಳ್ಳದೇ ಇರುವುದರಿಂದ, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತಾಂಶದಲ್ಲಿ ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ನಮೂದಿಸಿರುವ ಹೆಸರಿಗೂ ವ್ಯತ್ಯಾಸವಿರುವುದರಿಂದ, ಕೌನ್ಸಿಲಿಂಗ್ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೌನ್ಸಿಲಿಂಗ್ ದತ್ತಾಂಶ ನಮೂದಿಸದೇ ಇರುವುದರಿಂದ ಹಾಗೂ ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ವರ್ಷದ ದತ್ತಾಂಶವನ್ನು ವಿಶ್ವವಿದ್ಯಾಲಯಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದೊಂದಿಗೆ ಹಂಚಿಕೊಳ್ಳದೇ ಇರುವ ತಾಂತ್ರಿಕ ಕಾರಣಗಳಿಂದಾಗಿ ವಿದ್ಯಾರ್ಥಿವೇತನ / ಶುಲ್ಕ ಮರುಪಾವತಿ ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ಮಾಹಿತಿಯನ್ನು ಅಪ್ಡೇಟ್ ಮಾಡಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ವಿದ್ಯಾರ್ಥಿಗಳ ಲಾಗಿನ್ ಹಾಗೂ ತಾಲೂಕು / ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಲಾಗಿನ್ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸದರಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನವರಿ 30 ರ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳುವಂತೆ, ಅಪ್ಡೇಟ್ ಮಾಡದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
















