ಫೆ.14,15: ಕರ್ಮಸಿದ್ಧಿ–2020’ ಅಂತರರಾಷ್ಟ್ರೀಯ ಸಮ್ಮೇಳನ

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪಂಚಕರ್ಮ ಮತ್ತು ಜಾನಪದ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಜನ್ಮದಿನ ಅಂಗವಾಗಿ ಇದೇ 14 ಮತ್ತು 15ರಂದು ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ‘ಕರ್ಮಸಿದ್ಧಿ–2020’ ಎಂಬ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ನಿರಂಜನ್‌ ರಾವ್‌ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಈ ಎರಡು ದಿನಗಳ ಸಮ್ಮೇಳನದಲ್ಲಿ 1 ಸಾವಿರ ದೇಶ–ವಿದೇಶಗಳ ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ವೈದ್ಯರು ಭಾಗವಹಿಸುವರು. 14 ಮಂದಿ ವಿಶೇಷ ಆಹ್ವಾನಿತರು ಪಾರಂಪರಿಕ ಹಾಗೂ ಆಧುನಿಕ ಪಂಚಕರ್ಮ ಪದ್ಧತಿಗಳ ಬಗ್ಗೆ ಉಪನ್ಯಾಸ ನೀಡುವರು. 600 ಸಂಶೋಧನಾ
ವಿದ್ಯಾರ್ಥಿಗಳು ಪ್ರಬಂಧ ಮಂಡಿಸುವರು. ಹಾಗೆಯೇ ವಿದ್ಯಾರ್ಥಿಗಳಿಗೆ ಮತ್ತು ವೈದ್ಯರಿಗೆ ಮೊಬೈಲ್‌ ಪೋಟೊಗ್ರಾಫಿ, ಪ್ರಬಂಧ, ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಫೆ. 14ರಂದು ಬೆಳಿಗ್ಗೆ 9ಗಂಟೆಗೆ ಭಾರತ ಸರ್ಕಾರದ ಆಯುಷ್‌ ವಿಭಾಗದ ಕಾರ್ಯದರ್ಶಿ ರಾಜೇಶ್‌ ಕೊಟೇಚ ಸಮ್ಮೇಳನಕ್ಕೆ ಚಾಲನೆ ನೀಡುವರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಮೀನುಗಾರಿಕಾ
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್‌, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಬಿ. ಯಶೋವರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಫೆ. 15ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಆಯುಷ್‌ ವಿಭಾಗದ ಆಯುಕ್ತೆ ಮೀನಾಕ್ಷಿ ನೇಗಿ ಭಾಗವಹಿಸುವರು. ಇದೇ ವೇಳೆ ವಿವಿಧ ಆಯುರ್ವೇದ ಔಷಧಿ ತಯಾರಿಕಾ ಘಟಕಗಳ ಪ್ರದರ್ಶನ ನಡೆಯಲಿದೆ. ಫೆ. 13ರಂದು ಬೆಳಿಗ್ಗೆ 6.30ಕ್ಕೆ 6.5 ಕಿ.ಮೀ.ಗಳ ‘ರನ್‌ ಫಾರ್‌ ಬಯೋಪ್ಯುರಿಫಿಕೇಶನ್‌’ ಎಂಬ ವಾಕಥಾನ್‌ ಹಮ್ಮಿಕೊಳ್ಳಲಾಗಿದ್ದು, ಕಾಲೇಜಿನ ವೈದ್ಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಲಹೆಗಾರ ಡಾ. ಎಸ್‌. ನಾಗರಾಜ್‌, ಸಂಘಟನಾ ಕಾರ್ಯದರ್ಶಿಗಳಾದ ಡಾ. ಚೈತ್ರಾ ಹೆಬ್ಬಾರ್‌, ಡಾ. ಪಿ.ಎಚ್‌. ಶ್ರೀಕಾಂತ್‌, ವೈದ್ಯ ಡಾ. ರವಿ ಭಟ್‌, ನಿತಿನ್‌ ಇದ್ದರು.