ಉಡುಪಿ: ಸ್ವತಃ ಮಗಳ ಮೇಲೆ ಎರಡು ಬಾರಿ ಅತ್ಯಾಚಾರ ನಡೆಸಿದ ಆರೋಪದಡಿ ಬಂಧಿತನಾಗಿದ್ದ ತಂದೆಯ ಮೇಲಿನ ದೋಷಾರೋಪಣೆಗಳು ಸಾಭೀತಾದ ಹಿನ್ನಲೆ ಆತ ಅಪರಾಧಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ತೀರ್ಪು ಪ್ರಕಟಿಸಿದ್ದಾರೆ.
ಉಡುಪಿ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020 ರ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿ ತಾಯಿ ಹಾಗೂ ಕಿರಿಯ ಸೋದರ ಇಲ್ಲದ ಸಂದರ್ಭ 41 ವರ್ಷದ ತಂದೆ 14 ವರ್ಷ ಪ್ರಾಯದ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ. ಎರಡನೇ ಬಾರಿಯೂ ಮನೆಯಲ್ಲಿ ಯಾರಿಲ್ಲದ ವೇಳೆ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು ಯಾರಿಗಾದರೂ ಹೇಳಿದಲ್ಲಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ. ಆದರೆ ಬಾಲಕಿ ಪಕ್ಕದ ಮನೆಯವರ ಸಹಕಾರದಿಂದ ತನ್ನ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ಮನೆಗೆ ಬಂದ ಆಕೆ ಕೂಲಂಕುಷವಾಗಿ ವಿಚಾರಿಸಿದಾಗ ಬಾಲಕಿನಡೆದ ಘಟನೆ ವಿವರಿಸಿದ್ದಾಳೆ. ಬಳಿಕ ತಾಯಿ ಈ ಬಗ್ಗೆ ಉಡುಪಿ ಮಹಿಳಾ ಠಾಣೆಗೆ ದೂರು ನೀಡಿದ್ದು ಪೋಕ್ಸೋ ಕಾಯ್ದೆಯಡಿ ಆರೋಪಿ ತಂದೆಯನ್ನು ಬಂಧಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಮಹಿಳಾ ಠಾಣೆಯ ಅಂದಿನ ಸಿಪಿಐ ಸಿ.ಕಿರಣ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಒಟ್ಟು 23 ಸಾಕ್ಷಿಗಳ ಪೈಕಿ ನ್ಯಾಯಾಲಯದಲ್ಲಿ 11 ಮಂದಿ ವಿಚಾರಣೆ ನಡೆದಿತ್ತು. ಸಂತ್ರಸ್ತ ಬಾಲಕಿ, ಬಾಲಕಿಯ ತಾಯಿ ಹಾಗೂ ನೆರೆಮನೆಯಾಕೆ ನುಡಿದ ಸಾಕ್ಷಿಗಳು ಅಭಿಯೋಜನೆಗೆ ಪೂರಕವಾಗಿತ್ತು. ಇದೆಲ್ಲದರ ಆಧಾರದಲ್ಲಿ ಬಾಲಕಿಯ ತಂದೆ ಅಪರಾಧಿ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ ಜೀವಿತಾವಧಿ (ಕೊನೆ ಉಸಿರು ಇರುವ ತನಕ) ಜೈಲು ಶಿಕ್ಷೆ, 20 ಸಾವಿರ ದಂಡ ಮತ್ತು ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ 5 ಸಾವಿರ ದಂಡ ವಿಧಿಸಿದ್ದು ಸಂತ್ರಸ್ತ ಬಾಲಕಿಗೆ ಸರಕಾರ 5 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಲಾಗಿದೆ.
ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.