ಉಡುಪಿ: ಅಪಘಾತಕ್ಕೆ ತಂದೆ- ಮಗಳು ಬಲಿ; ದೈವದ ಕೋಲದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ

ಉಡುಪಿ: ಮನೆಯ ದೈವದ ಕೋಲಕ್ಕೆ ಹುಬ್ಬಳ್ಳಿಯಿಂದ ಬರುತ್ತಿದ್ದ ಮಗಳು ಹಾಗೂ ಆಕೆಯನ್ನು ಕರೆದುಕೊಂಡು ಹೋಗಲು ಬಸ್ ಸ್ಟಾಂಡ್ ಗೆ ಬಂದಿದ್ದ ತಂದೆ ಬುಧವಾರ ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.

ಗರಡಿಮಜಲು ನಿವಾಸಿ, ಕರಾವಳಿ ಕಾವಲು ಪಡೆಯ ಎಎಸ್ ಐ 58 ವರ್ಷದ ಗಣೇಶ್ ಪೈ ಹಾಗೂ ಅವರ ಪುತ್ರಿ 25 ವರ್ಷದ ಗಾಯತ್ರಿ ಪೈ ಮೃತ ದುರ್ದೈವಿಗಳು. ಗದಗದಿಂದ ಬಂದ ಮಗಳನ್ನು ಕರೆದುಕೊಂಡು ಹೋಗಲು ಗಣೇಶ್ ಪೈ ಅವರು ಸಂತೆಕಟ್ಟೆಗೆ ಬಂದಿದ್ದರು.

ಮಗಳನ್ನು ತನ್ನ ಸ್ಕೂಟರ್ ನಲ್ಲಿ ಕುರಿಸಿಕೊಂಡು ಸಂತೆಕಟ್ಟೆಯ ರಾ.ಹೆ.66ರಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ವೇಳೆ ಕೊಲ್ಲೂರಿಗೆ ಹೋಗುತ್ತಿದ್ದ ಕೇರಳದ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂರು ತಿಂಗಳ ಗರ್ಭಿಣಿಯಾಗಿದ್ದ ಗಾಯತ್ರಿ ಸ್ಥಳದಲ್ಲೇ ಸಾವನ್ನಪ್ಪಿದರೆ, ತಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗಾಯತ್ರಿ ಅವರಿಗೆ ಮದುವೆ ಆಗಿ ಮೂರು ವರ್ಷವಾಗಿದ್ದು, ಪತಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ಮಾರ್ಚ್ 4ಕ್ಕೆ ಮನೆಯಲ್ಲಿ ದೈವರ ಕೋಲ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಗಾಯತ್ರಿ ಪೈ ಅವರು ಗದಗದ ಗಂಡನ ಮನೆಯಿಂದ ಊರಿಗೆ ಬರುತ್ತಿದ್ದರು. ಸರಳ ಸ್ವಭಾವದ ಗಣೇಶ್ ಪೈ ಅವರು ಉಡುಪಿ ನಗರ ಠಾಣೆ, ಕುಂದಾಪುರ ಹಾಗೂ ಸಂಚಾರ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು.

ಇವರ ಇಬ್ಬರು ಹೆಣ್ಣು ಮಕ್ಕಳ ಪೈಕಿ ಗಾಯತ್ರಿ ಪೈ ಅವರು ಹಿರಿಯ ಮಗಳಾಗಿದ್ದರು. ತಂದೆ ಮಗಳ ಅಕಾಲಿಕ ದುರ್ಮರಣದಿಂದಾಗಿ ದೈವದ ಕೋಲದ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.