ಉಡುಪಿ: ಬಾರ್ ಮಾಲೀಕರಿಗೆ ಅಗ್ನಿ ಸುರಕ್ಷತೆ ಕಡ್ಡಾಯವಾಗಿ ಅಳವಡಿಸುವಂತೆ ಮತ್ತು ನಿಯಮ ಪಾಲನೆ ಮಾಡುವಂತೆ ಅಬಕಾರಿ ಇಲಾಖೆ ಎಚ್ಚರಿಕೆ

ಉಡುಪಿ: ಮೈಸೂರು ಪಬ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಉಡುಪಿ ಅಬಕಾರಿ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲ ಸನ್ನದುದಾರರು ಹಾಗೂ ಬಾರ್ ಮಾಲಕರಿಗೆ ಅಗ್ನಿ ಅವಘಡ ಸಂಭವಿಸ ದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಯಾಗಾರವನ್ನು ಉಡುಪಿ ಅಬಕಾರಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಉಡುಪಿ ಅಬಕಾರಿ ಜಿಲ್ಲಾಧಿಕಾರಿ ಟಿ.ಎಂ. ಶ್ರೀನಿವಾಸ್ ಮಾತನಾಡಿ, ಎಲ್ಲ ಸನ್ನದು ಕಟ್ಟಡಗಳಲ್ಲಿ ಸನ್ನದುದಾರರು ಬೆಂಕಿ ನಂದಿಸುವ ಸಾಧನ ಹಾಗೂ ಬೆಂಕಿ ಅಲರಾಮ್‌ಗಳನ್ನು ಕಲ್ಪಿಸಬೇಕು. ಸನ್ನದು ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅಗ್ನಿ ಅವಘಡಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.

ಸನ್ನದುಗಳಲ್ಲಿ ವಿದ್ಯುತ್ ಸಂಪರ್ಕ ಸರಿಯಾಗಿ ನಿರ್ವಹಣೆ ಮಾಡುತ್ತಿರ ಬೇಕು. ತುರ್ತು ನಿರ್ಗಮನ ದ್ವಾರಗಳನ್ನು ಯಾವುದೇ ಅಡೆತಡೆಗಳು ಇಲ್ಲದಂತೆ ಇರಿಸಬೇಕು. ಸನ್ನದಿನಲ್ಲಿ ಮತ್ತು ಅಡುಗೆ ಮನೆಯಲ್ಲಿ ಸರಿಯಾಗಿ ಗಾಳಿ ಸಂಚಾರ ವ್ಯವಸ್ಥೆ ಕಲ್ಪಿಸಿರಬೇಕು. ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆಯನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಅವರು ಮಾಹಿತಿ ನೀಡಿದರು.

ಕೆಲವು ಬಾರ್‌ಗಳಲ್ಲಿ ಅನಧಿಕೃತವಾಗಿ ಮೂರು, ನಾಲ್ಕನೇ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿ, ಸರ್ವಿಸ್ ನೀಡುವ ಕಾರ್ಯ ಮಾಡಲಾಗುತ್ತದೆ. ಈ ರೀತಿಯ ಸ್ಥಳಗಳಲ್ಲಿ ಯಾವುದೇ ಅನಾಹುತ ನಡೆದರೆ ಸನ್ನದುದಾರರೇ ನೇರ ಜವಾಬ್ದಾರಾಗಿರುತ್ತಾರೆ. ಅವರು ಕಾನೂನು ಚೌಕಟ್ಟಿನಲ್ಲಿ ಅನುಮತಿ ಪಡೆದುಕೊಂಡು ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.