ಚುನಾವಣಾ ಸುದ್ದಿಗಳ ಮೇಲೆ ನಿಗಾ: 24*7 ಪರಿಶೀಲನೆ ಕೇಂದ್ರ ಸ್ಥಾಪನೆ

ಉಡುಪಿ: ಲೋಕಸಭಾ ಚುನಾವಣೆಯ ಪ್ರಯುಕ್ತ  ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯ ಎಲ್ಲಾ ಮುದ್ರಣ, ಟಿವಿ, ರೇಡಿಯೋ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರವಾಗುವ ರಾಜಕೀಯ ಪಕ್ಷಗಳ ಜಾಹೀರಾತು, ಪ್ರಚಾರ ಕಾರ್ಯಕ್ರಮ, ಸುದ್ದಿಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ  ಮೀಡಿಯಾ ಮಾನಿಟರಿಂಗ್ ಮತ್ತು ಮೀಡಿಯಾ ಸರ್ಟಿಫಿಕೇಷನ್ (ಎಂಸಿಎಂಸಿ) ಕೇಂದ್ರವನ್ನು ತೆರೆಯಲಾಗಿದ್ದು, ಚುನಾವಣಾ ಸುದ್ದಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಎಲ್ಲಾ ಮುದ್ರಣ ಮಾಧ್ಯಮ ಮತ್ತು ಸ್ಥಳೀಯ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ವೀಕ್ಷಿಸುವ ಜೊತೆಗೆ ಸ್ಥಳೀಯ ಕೇಬಲ್ ಟಿವಿ ಕಾರ್ಯಕ್ರಮಗಳನ್ನು ಸಂಪೂರ್ಣ ರೆಕಾರ್ಡ್ ಮಾಡಲಾಗುತ್ತಿದೆ.

ಸ್ಥಳೀಯ ಕೇಬಲ್ ಚಾನೆಲ್‍ಗಳಲ್ಲಿ ಜಾಹೀರಾತು ನೀಡಲು ಪೂರ್ವಾನುಮತಿ ಅಗತ್ಯವಾಗಿರುತ್ತದೆ,  ಈ ಕೇಂದ್ರದಲ್ಲಿ ಪರಿಶೀಲನೆ ಸಮಯದಲ್ಲಿ ಕಂಡುಬರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳ  ಕುರಿತು,  ಸಂಬಂಧಪಟ್ಟ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಕ್ಷೇತ್ರ ಚುನಾವಣಾಧಿಕಾರಿ (ಆರ್‍ಒ) ಅವರು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಕಾರಣ ಕೇಳಿ ನೋಟೀಸು ನೀಡುವರು.

ಜಿಲ್ಲೆಯ ವಿವಿಧ ಇಲಾಖೆಯ ಸಿಬ್ಬಂದಿಗಳನ್ನು 3 ಪಾಳಿಯಲ್ಲಿ ವೀಡಿಯೋ ವೀಕ್ಷಣಾ ತಂಡಕ್ಕೆ ನೇಮಿಸಿದ್ದು, 8 ಚಾನೆಲ್‍ಗಳನ್ನು ವೀಕ್ಷಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದು, ಟಿವಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನು ಡಿವಿಆರ್‍ನಲ್ಲಿ ಸಂಗ್ರಹಿಸಲಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುವ ರಾಜಕೀಯ ಸುದ್ದಿಗಳನ್ನು ವೀಕ್ಷಣೆ ಮಾಡಲು ಸಹ ಸಿಬ್ಬಂದಿ ನೇಮಿಸಲಾಗಿದೆ.

ದಿನ ಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹೀರಾತು, ಕಾಸಿಗಾಗಿ ಸುದ್ದಿ ಪ್ರಕರಣಗಳ ಪತ್ತೆ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದ್ದು, ಪ್ರತಿದಿನದ ಪತ್ರಿಕಾ ವರದಿ ವೀಕ್ಷಿಸಿ ಸಂಶಯ ಬಂದ ಕಾಸಿಗಾಗಿ ಸುದ್ದಿ ಪ್ರಕಟಣೆಯನ್ನು, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನುರಿತ ತಜ್ಞರನ್ನು ಒಳಗೊಂಡ ಸಮಿತಿಯ ವಿಚಾರಣೆಗೆ ನೀಡಿ, ಸುದ್ದಿ ನಿಜವಾಗಿದ್ದರೆ ಸಂಬಂದಪಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ಸಂಗ್ರಹಿಸಿ, ಅದರ ವೆಚ್ಚದ ವಿವರಣೆಯನ್ನು ಚುನಾವಣಾ ಲೆಕ್ಕಪತ್ರ ತಂಡಕ್ಕೆ ನೀಡಲಾಗುವುದು.

ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯ ಎಂಸಿಎಂಸಿ ಸಮಿತಿಯಲ್ಲಿ, ತಂಡದ ನೋಡೆಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಸದಸ್ಯರಾಗಿ ನಿವೃತ್ತ ಹಿರಿಯ ಪತ್ರಕರ್ತ ವರದೇಶ್ ಹಿರೇಗಂಗೆ ಮತ್ತಿತರರು ಇದ್ದಾರೆ.

ಯಾವುದೇ ಹಂತದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಹಾಗೂ ಅಭ್ಯರ್ಥಿಗಳ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ ತಂಡಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ.