ಉಡುಪಿ: ಗಿಡಮರಗಳನ್ನು ಕಡಿದು ಕಾಂಕ್ರಿಟ್ ಕಟ್ಟಡಗಳನ್ನು ನಿರ್ಮಿಸುತ್ತಿರುವ ಪರಿಣಾಮ ವಾತಾವರಣದ ಉಷ್ಣಾಂಶ ಹೆಚ್ಚುತ್ತಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಭೂ ಸಾಗರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಚ್. ಗಂಗಾಧರ್ ಭಟ್ ಆತಂಕ ವ್ಯಕ್ತಪಡಿಸಿದರು.
ಉಡುಪಿ ವಿಜ್ಞಾನ ಫೌ-ಂಡೇಶನ್ ಫಾರ್ ಇನೋವೇಶನ್ ರಿಸರ್ಚ್ ಹಾಗೂ ಬೆಳ್ಳಾರೆ ಜಿಐಎಸ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಉಡುಪಿ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಭೌಗೋಳಿಕ ಮಾಹಿತಿ ವ್ಯವಸ್ಥೆ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೂರರಿಂದ ನಾಲ್ಕುವರೆ ಸಾವಿರ ಮಿ.ಮೀ. ಸರಾಸರಿ ಮಳೆ ಆಗುತ್ತಿದೆ. ಎಷ್ಟೇ ಮಳೆ ಸುರಿದರೂ ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿ ಆಗುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ಆ ಮೂಲಕ ಮಳೆ ನೀರನ್ನು ಇಂಗಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಕೈಜೋಡಿಸಬೇಕು ಎಂದು ಕರೆನೀಡಿದರು.
ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಭೂ ವಿಜ್ಞಾನದಲ್ಲಿ ಉನ್ನತಮಟ್ಟದ ಸಂಶೋಧನೆ ನಡೆಸಲು ವಿಫುಲ ಅವಕಾಶವಿದೆ. ಭೂ ವಿಜ್ಞಾನದಲ್ಲಿ ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆದವರಿಗೆ ಹಲವು ಉದ್ಯೋಗಾವಕಾಶಗಳು ಕಾಯುತ್ತಿವೆ ಎಂದರು.
ವಿಜ್ಞಾನ -ಫೌಂಡೇಶನ್ ಫಾರ್ ಇನೋವೇಶನ್ ರಿಸರ್ಚ್‌ನ ನಿರ್ದೇಶಕ ಡಾ. ನವೀನ್‌ಚಂದ್ರ, ಪಿಎಚ್.ಡಿ ವಿದ್ಯಾರ್ಥಿನಿ ಶಾನೆನ್ ಪಿಂಟೋ, ಜಿಐಎಸ್ ವಿಶ್ಲೇಷಕ ಶಿವಪ್ರಸಾದ್ ಉಪಸ್ಥಿತರಿದ್ದರು. ಫೌಂಡೇಶನ್ ನಿರ್ದೇಶಕ ಡಾ. -ಫ್ರಾನ್ಸಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.