ಉಡುಪಿ, ಎ. 29: ದೇಶದ ಯುವ ಶಕ್ತಿ ಶೈಕ್ಷಣಿಕಣಿಕವಾಗಿ ಸದೃಢವಾಗುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಒಳ್ಳೆಯ ಪ್ರಜೆಯಾಗಿ ಹೆತ್ತವರಿಗೆ ಗೌರವ ಮತ್ತು ಕೀರ್ತಿಯನ್ನು ತಂದುಕೊಡಲು ಸಾಧ್ಯ ಎಂದು ಶಾಸಕರಾದ ಯಶ್‌ಪಾಲ್ ಎ. ಸುವರ್ಣ ಅಭಿಪ್ರಾಯಪಟ್ಟರು.
ಇವರು ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಡಾ. ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ನಮ್ಮ ಸಮಾಜದ ಸಾಂಸ್ಕೃತಿಕ ರಾಯಭಾರಿಗಳು. ಸಂಸ್ಕೃತಿಯನ್ನು ತಿಳಿದುಕೊಂಡು ಪಾಲಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವಿದ್ಯಾರ್ಥಿಗಳು ಬಹು ಮುಖ್ಯಪಾತ್ರ ವಹಿಸುತ್ತಾರೆ ಎಂದರು.
ಅಜೆಕಾರು ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ಕಾರ್ಕಳ ಇದರ ಅಧ್ಯಕ್ಷರು ಡಾ. ಸುಧಾಕರ ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾಲೇಜು ಶಿಕ್ಷಣ ವಿದ್ಯಾರ್ಥಿ ಜೀವನದ ಸುವರ್ಣಕಾಲ. ಕೇವಲ ಕ್ಷಣಿಕ ಸಂತೋಷ ನೀಡುವ ವಿಷಯಗಳಿಗೆ ಮಾರುಹೋಗದೆ, ತಂದೆ ತಾಯಿಯ ತ್ಯಾಗ ಮತ್ತು ಪರಿಶ್ರಮವನ್ನು ಅರಿತುಕೊಂಡು ಭವಿಷ್ಯದ ಬದುಕನ್ನು ಭದ್ರವಾಗಿ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಸಾಹಿತ್ಯದ ಆಸಕ್ತಿಯು ಒಬ್ಬ ವಿದ್ಯಾರ್ಥಿಗೆ ತಮ್ಮ ಸಾಮಾಜಿಕ ಜೀವನ ಮತ್ತು ಮೌಲ್ಯಗಳನ್ನು ಅರ್ಥಮಾಡಿಕೊಂಡು ಬದುಕಲು ಸಹಾಯವಾಗುತ್ತದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ಪ್ರಾದೇಶಿಕ ಕಛೇರಿಯ ಮಾನ್ಯ ಜಂಟಿ ನಿರ್ದೇಶಕರು ಪ್ರೊ. ಕವಿತಾ ಕೆ. ಆರ್ ಮಾತನಾಡಿ ಇಂದು ಸರಕಾರಿ ಕಾಲೇಜುಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಯಶಸ್ಸನ್ನು ಕಾಣುತ್ತಿವೆ. ಸರಕಾರಿ ಕಾಲೇಜುಗಳು ಅತೀ ಕಡಿಮೆ ಕಾಲೇಜು ಪ್ರವೇಶ ಶುಲ್ಕ ಹೊಂದಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ಯಾಮಿಲಿ ನವೀನ್ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಲರಾದ ಪ್ರೊ. ಶ್ರೀಧರ್ ಪ್ರಸಾದ್ ಕೆ. ಕಾಲೇಜು ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಸೇವಾ ನಿವೃತಿಯನ್ನು ಹೊಂದಲ್ಲಿರುವ ಕಾಲೇಜಿನ ಪ್ರಾಂಶುಪಾಲರು ಮತ್ತು ಹಿರಿಯ ಉಪನ್ಯಾಸಕಿ ಗೌರಿ ಎಸ್ ಭಟ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯ ನಿಕಾಯದ ಡೀನ್ ಪ್ರೊ. ಗೌರಿ ಎಸ್ ಭಟ್, ವಿಜ್ಞಾನ ನಿಕಾಯದ ಡೀನ್ ಹಾಗೂ ಐಕ್ಯೂಎಸಿ ಸಂಚಾಲಕರು ಪ್ರೊ. ಶ್ರೀಮತಿ ಅಡಿಗ, ಸಾಂಸ್ಕೃತಿಕ ಸಂಚಾಲಕರು ರೇಖಾ ಎಸ್.ಎನ್, ದೈಹಿಕ ಶಿಕ್ಷಣ ನಿರ್ದೇಶಕರು ಡಾ. ರಾಮಚಂದ್ರ ಪಾಟ್ಕರ್ ಹಾಗೂ ಕಾಲೇಜಿನ ಪದವಿ ಮತ್ತು ಸ್ನಾತಕ ಪದವಿಯ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಕಲಾ ನಿಕಾಯದ ಡೀನ್ ಪ್ರೊ. ನಿಕೇತನಾ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪ್ರಸನ್ನ ಪಿ.ಬಿ ಕಾರ್ಯಕ್ರಮವನ್ನು ನಿರೂಪಿಸಿ ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ರವಿ ಪ್ರಸಾದ್ ಕೆ.ಜಿ ವಂದಿಸಿದರು.












