ಉಡುಪಿ: ಉಡುಪಿಯ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೋಣೆ ಮಾಸದ ದಿನಂಪ್ರತಿ ಸೆ. 17ರ ತನಕ ವಿಶೇಷ ಸೋಣಾರತಿ ಸೇವೆ ನಡೆಯಲಿದೆ.
ಆ ಪ್ರಯುಕ್ತ ಕ್ಷೇತ್ರದಲ್ಲಿ ಪ್ರತೀ ಶುಕ್ರವಾರ ವಿಶೇಷ ಪೂಜೆ, ಜತೆಗೆ ಸೋಣೆ ಮಾಸದ ನಾಲ್ಕು ಶುಕ್ರವಾರವೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಹೂವಿನ ಪೂಜೆ, ರಂಗಪೂಜೆ, ಹಾಲು ಪಾಯಸ, ಅನ್ನಸಂತರ್ಪಣೆ ನಡೆಯಲಿದೆ.
ಸೋಣಾರತಿ ಸಮಯದಲ್ಲಿ ಹಲಸಿನ ಮರದ ವಿವಿಧ ಆಕೃತಿಗಳ 12 ಆರತಿಗಳನ್ನು ಬೆಳಗಲಾಗುತ್ತದೆ. ಪ್ರತೀ ಶುಕ್ರವಾರ ಬೆಳಗಲ್ಪಡುವ 14 ಆರತಿಗಳೊಂದಿಗೆ 12 ಆರತಿಗಳು ಸೇರಿ ಒಟ್ಟು 26 ಆರತಿಗಳು ಬೆಳಗಲ್ಪಡುತ್ತವೆ. ಭಕ್ತರು ಇಲ್ಲಿ ಕೃತಜ್ಞತಾಪೂರ್ವಕವಾಗಿ ಸೋಣಾರತಿ ಸಲ್ಲಿಸುತ್ತಿದ್ದಾರೆ.
ಪವಿತ್ರ ಸೋಣೆ ಮಾಸದಲ್ಲಿ ಮುತ್ತೈದೆಯರು ಶ್ರೀ ದೇವಿಗೆ ವಿಶೇಷವಾಗಿ ಪೂಜಿಸಿದ ಚೂಡಿ, ಗಾಜಿನ ಬಳೆ, ಬಾಗೀನ ಸಮರ್ಪಿಸುತ್ತಾರೆ. ಸೋಣೆ ಮಾಸದ ಪ್ರಥಮ ಶುಕ್ರವಾರ ಕೃಷ್ಣಾಷ್ಟಮಿಯಂದು ದೇವಿಗೆ ಕೃಷ್ಣನ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಆಗಸ್ಟ್ 30ಕ್ಕೆ ದೇವಿಯನ್ನು ಗಾಜಿನ ಬಳೆಗಳಿಂದ ಸಿಂಗರಿಸಿ ಪೂಜೆ, ಸೆ. 6ಕ್ಕೆ ಕ್ಷೇತ್ರದ ವತಿಯಿಂದ ಸಾಮೂಹಿಕ ಹೂವಿನ ಪೂಜೆ, ಸೆ. 13ಕ್ಕೆ ವಸಂತ ಪೂಜೆಯೊಂದಿಗೆ ಸೋಣಾರತಿ ಸೇವೆ ನಡೆಯಲಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.












