ಉಡುಪಿ: ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಶೀಘ್ರವೇ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಉಡುಪಿ ಜಿಲ್ಲಾ ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ರಾಷ್ಟ್ರಪತಿಗಳಿಗೆ ಪೋಸ್ಟ್ ಕಾರ್ಡ್ ಬರೆಯುವ ಮೂಲಕ ಆಗ್ರಹಪಡಿಸಲಾಯಿತು.
ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಗುರುವಾರ ಹಮ್ಮಿಕೊಂಡ ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕರ್ತರು ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಘಟನೆಯ ವಿರುದ್ಧ ಖಂಡನೆ ವ್ಯಕ್ತಪಡಿಸಿದರು. ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳ ತ್ವರಿತ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದರು.
ತಾಪಂ ಸದಸ್ಯೆ ಡಾ. ಸುನೀತಾ ಶೆಟ್ಟಿ ಮಾತನಾಡಿ, ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುತ್ತಿಲ್ಲ. ಇದರಿಂದಾಗಿ ಅತ್ಯಾಚಾರ ಘಟನೆಗಳು ಮರುಕಳಿಸುತ್ತಿವೆ. ಅತ್ಯಾಚಾರ ಘಟನೆಗಳನ್ನು ಮಹಿಳೆಯರು ಮಾತ್ರವಲ್ಲ, ಇಡೀ ಸಮಾಜವೇ ಖಂಡಿಸಬೇಕು ಎಂದರು.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಾನೂನಿನಲ್ಲಿ ತಿದ್ದುಪಡಿ ಮಾಡಿ ತ್ವರಿತವಾಗಿ ಗಲ್ಲುಶಿಕ್ಷೆ ನೀಡುವಂತಾಗಬೇಕು. ತ್ವರಿತವಾಗಿ ಕಠಿಣ ಕಾನೂನು ಕ್ರಮಗಳು ಜಾರಿಗೊಳಿಸುವ ಮೂಲಕ ಮಕ್ಕಳು, ಮಹಿಳೆಯರು ಸುರಕ್ಷಿತವಾಗಿ ಬದುಕುವ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.
ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷೆ ರೋಶನಿ ಒಲಿವೆರಾ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಮಹಿಳೆಯರು ಇನ್ನೂ ಸುರಕ್ಷಿತವಾಗಿಲ್ಲ. ಇಂದಿಗೂ ಭಯ, ಆತಂಕದಿಂದಲೇ ಬದುಕುವ ಸ್ಥಿತಿ ಇದೆ. ಹಾಗಾಗಿ ಸರ್ಕಾರ ಮಹಿಳೆಯರ ಸುರಕ್ಷತೆ ಹಾಗೂ ಅತ್ಯಾಚಾರ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.
ತಾಪಂ ಸದಸ್ಯರಾದ ಸುಲೋಚನಾ, ದಿನೇಶ್ ಕೋಟ್ಯಾನ್, ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಸಹ ಸಂಯೋಜಕಿ ಮೇರಿ ಡಿಸೋಜಾ, ಐರಿನ್ ಮೆನೆಜಸ್, ಚಂದ್ರಿಕಾ ಶೆಟ್ಟಿ, ಸೂರಿ ಸಾಲ್ಯಾನ್, ಮಹಾಬಲ ಕುಂದರ್, ಸುಲೋಚನಾ ದಾಮೋದರ್ ಮೊದಲಾದವರು ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಭಾಗವಹಿಸಿದ್ದರು.