ಉಡುಪಿ ಜಿಲ್ಲೆಯಲ್ಲಿ ಇಂದು 361 ಮಂದಿಗೆ ಕೋವಿಡ್ ಪಾಸಿಟಿವ್

ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣ ಬುಧವಾರ 361ಕ್ಕೆ ಜಿಗಿದಿದೆ. ಆ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ1625 ಏರಿಕೆಯಾಗಿದೆ. ಇಂದು 78 ಮಂದಿ ಸೋಂಕಿನಿಂದ  ಗುಣಮುಖರಾಗಿದ್ದಾರೆ.

ಪಾಸಿಟಿವ್ ಬಂದ 361 ಮಂದಿಯಲ್ಲಿ 178 ಮಂದಿ ಪುರುಷರಾಗಿದ್ದು, 183 ಮಂದಿ ಮಹಿಳೆಯರು. ಉಡುಪಿ ತಾಲೂಕಿನ 281, ಕುಂದಾಪುರ ತಾಲೂಕಿನ 26 ಹಾಗೂ ಕಾರ್ಕಳ ತಾಲೂಕಿನ 54 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ಮೂರು ತಾಲೂಕುಗಳ ಪಾಸಿಟಿವಿಟಿ ಪ್ರಮಾಣ ಸದ್ಯ ಶೇ.7.41, ಶೇ.2 ಹಾಗೂ ಶೇ.3.90 ಆಗಿದೆ. ಜಿಲ್ಲೆಯ ಪ್ರಮಾಣ ಶೇ.5.57ರಷ್ಟಿದೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 361 ಮಂದಿಯಲ್ಲಿ 24 ಮಂದಿಯನ್ನು ಕೋವಿಡ್ ಕೇರ್‌ ಸೆಂಟರ್‌ಗೂ, ನಾಲ್ವರನ್ನು ಕೋವಿಡ್ ಆಸ್ಪತ್ರೆಗೂ, ಏಳು ಮಂದಿ ಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿದ್ದು, ಉಳಿದ 326 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.