ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಡಾ. ಸುಬ್ರಹ್ಮಣ್ಯ ಭಟ್ ನೇಮಕ

ಉಡುಪಿ: ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಚಿಂತನೆಗಳನ್ನು ಬೆಳೆಸುವುದರ ಜೊತೆಗೆ ಮೌಢ್ಯವನ್ನು ದೂರ ಮಾಡುವ ಮತ್ತು ಹಲವಾರು ಪ್ರಗತಿಪರ ಯೋಜನೆಗಳನ್ನು ಕಾರ್ಯಾನುಷ್ಠಾನ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಆಯ್ಕೆಯಾಗಿದ್ದಾರೆ.

ರಾಜ್ಯದಾದ್ಯಂತ ಕ್ರಿಯಾಶೀಲವಾಗಿರುವ ಕ.ರಾ.ವೈ.ಸಂ.ಪರಿಷತ್ತು ರಾಜ್ಯಾಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅವರ ಮಾರ್ಗದರ್ಶನದಲ್ಲಿ ಜನಸಾಮಾನ್ಯರಲ್ಲೂ ವೈಜ್ಞಾನಿಕ ಚಿಂತನೆಯನ್ನು ಹುಟ್ಟುಹಾಕಿ ಜಾಗೃತಿ ಮೂಡಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತಿದೆ.

ಇತ್ತೀಚೆಗೆ ಉಡುಪಿಯಲ್ಲಿ ನಡೆದ ಸಂಘಟನೆಯ ಸದಸ್ಯರ ಸಭೆಯಲ್ಲಿ ವೃತ್ತಿಯಲ್ಲಿ ವೈದ್ಯರಾಗಿ, ಬೈಂದೂರಿನ ಸಂವೇದನಾ ವಿಜ್ಞಾನ & ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೂ ಆಗಿರುವ ಡಾ. ಸುಬ್ರಹ್ಮಣ್ಯ ಭಟ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಲುವಾಗಿ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಗೌರವಾಧ್ಯಕ್ಷರಾಗಿ ಜಗನ್ನಾಥ ಪನ್ಸಾಲೆ, ಉಪಾಧ್ಯಕ್ಷರಾಗಿ ವಸಂತಿ ಶೆಟ್ಟಿ ಬ್ರಹ್ಮಾವರ ಮತ್ತು ಚಂದ್ರ ನಾಯ್ಕ್. ಎಚ್., ಪ್ರಧಾನ ಕಾರ್ಯದರ್ಶಿಯಾಗಿ ಡಾ. ಕಿಶೋರಕುಮಾರ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಹರೀಶ ಕಟಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ರವೀಂದ್ರ ಎಚ್, ಕೋಶಾಧ್ಯಕ್ಷರಾಗಿ ಪ್ರಕಾಶ ಹೆಬ್ಬಾರ್, ಸಂಚಾಲಕರಾಗಿ ಸುಕುಮಾರ್ ಮುನಿಯಾಲ್‌, ಹಾಗೂ ಇಂದಿರಾ ಬುಡ್ನಾರ್ ಅವರನ್ನು, ನಿರ್ದೇಶಕರಾಗಿ ಬೈಕಾಡಿ ಮಂಜುನಾಥ ರಾವ್ ಶಿವಪುರ, ಡಾ. ಕೆ.ಪಿ.ಮಹಾಲಿಂಗಯ್ಯ, ವೆಂಕಟೇಶ ಭಟ್, ಗಣಪತಿ ಹೋಬಳಿದಾರ, ಜಗದೀಶ ದೇವಾಡಿಗ, ಅನ್ನಪೂರ್ಣ ಸಿದ್ದೇಶಪ್ಪ, ಸೀತಾನದಿ ವಿಜೇಂದ್ರ ಶೆಟ್ಟಿ ಹೆಬ್ರಿ, ಶಿವಪುರ ಮುರಳೀಧರ್‌ ಭಟ್‌ ಹೆಬ್ರಿ,  ಡಾ. ಕಾಂತಿ ಹರೀಶ್, ಶಾಂತಿ ಪಿರೇರಾ ಅವರನ್ನು ಆಯ್ದುಕೊಳ್ಳಲಾಗಿದೆ.