ಉಡುಪಿ:ತಮಿಳುನಾಡು ಮೂಲಕ ದಂಪತಿಗೆ ಮಗುವಿನ ದತ್ತು ಆದೇಶ ನೀಡಿದ ಜಿಲ್ಲಾಧಿಕಾರಿಗಳು

ಉಡುಪಿ: ತಮಿಳುನಾಡು ಮೂಲದ ದಂಪತಿಗೆ ಒಂದು ಮಗುವಿನ ಅಂತಿಮ ದತ್ತು ಆದೇಶವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ 2021ರ ಸೆಕ್ಷನ್ 56 (1) 58 ಮತ್ತು 61ರ ಅಡಿಯಲ್ಲಿ ಕುಟುಂಬದ ಪ್ರೀತಿ ವಂಚಿತ, ಪೋಷಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಮಾತ್ರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ನೀಡಲು ಅರ್ಹರಾಗಿರುತ್ತಾರೆ ಎಂದರು.

ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ದತ್ತು ಪಡೆಯಬೇಕು. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆಯದೇ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹುದಾಗಿದೆ. ಜಿಲ್ಲೆಯ ಸಂತೆಕಟ್ಟೆಯಲ್ಲಿ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ, ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆ ಹಾಗೂ ನಿಟ್ಟೂರು ಸರಕಾರಿ ಬಾಲಕಿಯರ ಬಾಲಮಂದಿರ ದಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದರು.

ಕಾನೂನು ಉಲ್ಲಂಘಿಸಿ ಅಥವಾ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿಯವರು ಶಾಮೀಲಾಗಿದ್ದಲ್ಲಿ 1 ಲಕ್ಷ ರೂಪಾಯಿ ದಂಡ ಹಾಗೂ 7 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡುಕೊ೦ಡವರಿಗೆ 1 ಲಕ್ಷ ದಂಡ ಹಾಗೂ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಸಿಬ್ಬಂದಿ ಸುರಕ್ಷಾ, ಉಡುಪಿ ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರದ ಮೆರಿನಾ ಉಪಸ್ಥಿತರಿದ್ದರು.

ದತ್ತು ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://missionvatsalya.wcd.gov.in ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಛೇರಿ ದೂರವಾಣಿ ಸಂಖ್ಯೆ: 0820-2574964 ಹಾಗೂ ಶ್ರೀ ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರ, ಆಶೀರ್ವಾದ್ ರಸ್ತೆ, ಸಂತೆಕಟ್ಟೆ, ಉಡುಪಿ ದೂರವಾಣಿ ಸಂಖ್ಯೆ: 9880442640 ನ್ನು ಸಂಪರ್ಕಿಸಬಹುದಾಗಿದೆ.