ಉಡುಪಿ ಜಿಲ್ಲೆಗೆ ಗರಿಷ್ಠ ಪ್ರಮಾಣದ ನೆರೆ ಪರಿಹಾರ ಕೊಡಿ: ಮಾಜಿ ಸಚಿವ ಸೊರಕೆ ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ನೆರೆಯಿಂದ ದೊಡ್ಡಮಟ್ಟದ ಹಾನಿ ಸಂಭವಿಸಿದ್ದು, ರಾಜ್ಯ ಸರ್ಕಾರ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದರು.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಉಡುಪಿ ಜಿಲ್ಲೆಗೆ ದೊಡ್ಡ ಆಘಾತ ಆಗಿದೆ. ಸಾವಿರಾರು ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. ನೂರಾರು ಮಂದಿಯ ಮನೆಗಳಿಗೆ ಹಾನಿಯಾದರೆ, ಇನ್ನೂ ಹಲವಾರ ಮನೆಗಳಿಗೆ ನೀರು ನುಗ್ಗಿದ್ದು, ಇದರಿಂದ ವಿವಿಧ ರೀತಿಯ ಉಪಕರಣಗಳು, ದಿನಬಳಕೆ ವಸ್ತುಗಳು ಹಾಳಾಗಿವೆ. ನೂರಾರು ಎಕರೆ ಬೆಳೆ ಹಾನಿ ಉಂಟಾಗಿದೆ. ಹಾಗಾಗಿ ದೊಡ್ಡಮಟ್ಟದ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಜನರಿಂದಲೇ ನೆರೆ ಸಂತ್ರಸ್ತರ ರಕ್ಷಣೆ:
ನೆರೆಗೆ ತುತ್ತಾದ ಜನರನ್ನು ಸ್ಥಳೀಯರೇ ಮೊದಲು ರಕ್ಷಣೆ ಮಾಡಿದ್ದು, ಶನಿವಾರ ಮಧ್ಯರಾತ್ರಿಯಿಂದಲೇ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಕಾರ್ಯದಲ್ಲಿ ಸ್ಥಳೀಯರು ತೊಡಗಿದ್ದರು. ಎನ್ ಡಿಆರ್ ಎಫ್ ನವರು ಬಂದದ್ದು ಮಧ್ಯಾಹ್ನದ ವೇಳೆಗೆ. ಅದಕ್ಕೂ ಮೊದಲೇ ಬಹುತೇಕ ನೆರೆ ಸಂತ್ರಸ್ತರ ರಕ್ಷಣೆ ಆಗಿತ್ತು. ಹೆಲಿಕಾಪ್ಟರ್ ಕೊನೆಗೂ ಬರಲೇ ಇಲ್ಲ. ಈಗ ನೆರೆ ಸಂತ್ರಸ್ತರನ್ನು ರಕ್ಷಿಸಿದ್ದು ಎನ್ ಡಿಆರ್ ಎಫ್ ತಂಡ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಬೇರೆ ಯಾರನ್ನಾದರೂ ಆಯ್ಕೆ ಮಾಡಿ:
ಕೆಪಿಸಿಸಿ ವಕ್ತಾರರನ್ನಾಗಿ ದಿಢೀರ್ ಆಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆ ಯು.ಆರ್. ಸಭಾಪತಿ, ವೆರೋನಿಕಾ ಕರ್ನೇಲಿಯೋ ಅವರನ್ನು ಆಯ್ಕೆ ಮಾಡಲಾಗಿತ್ತು ಎನ್ನಲಾಗಿತ್ತು. ಆದರೆ ಏಕಾಏಕಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ನನಗೆ ಸಾಕಷ್ಟು ಜವಾಬ್ದಾರಿ ಇದೆ. ಹಾಗಾಗಿ ಬೇರೆ ಯಾರನ್ನಾದರೂ ಸಮರ್ಥ ನಾಯಕರನ್ನು ನೇಮಕ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದರು.