ಉಡುಪಿ: ಮಾ.6ಕ್ಕೆ ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ಜಿಲ್ಲಾ ರೈತ ಸಮಾವೇಶ

ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ಜಿಲ್ಲಾ ರೈತ ಸಮಾವೇಶ -2022 ಮಾ.6ರಂದು ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಅಂದು ಬೆಳಿಗ್ಗೆ 10.15ಕ್ಕೆ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಅಸಿಸ್ಟೆಂಟ್ ಮ್ಯಾನೇಜರ್ ರಾಜಗೋಪಾಲ ಎಸ್., ರೋಟರಿಯ ಮಾಜಿ ಸಹಾಯಕ ಗವರ್ನರ್ ಮಂಜುನಾಥ ಉಪಾಧ್ಯ ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಮಧ್ಯಾಹ್ನ 1 ಗಂಟೆಯಿಂದ ವಿವಿಧ ವಿಚಾರಗೋಷ್ಠಿ ನಡೆಯಲಿದೆ. ಉತ್ತಮ ಗೇರು ತಳಿಗಳು ಮತ್ತು ಬೆಳೆ ತಾಂತ್ರಿಕತೆ, ಅಡಿಕೆ ಕೊಳೆ ರೋಗ ಹತೋಟಿ, ವೈಜ್ಞಾನಿಕ ಕೃಷಿ ಮತ್ತು ತರಬೇತಿ ಹಾಗೂ ಮಲ್ಲಿಗೆ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಉಪಯುಕ್ತತೆ ವಿಷಯದ ಕುರಿತ ಗೋಷ್ಠಿ ಜರುಗಲಿದೆ.

ಮಧ್ಯಾಹ್ನ ಎರಡು ಗಂಟೆಯಿಂದ ಆರಂಭಗೊಳ್ಳುವ ಎರಡನೇ ವಿಚಾರ ಗೋಷ್ಠಿಯಲ್ಲಿ ‘ಹೈನುಗಾರಿಕೆಯಲ್ಲಿ ಪೌಷ್ಠಿಕ ಆಹಾರದ ಬಳಕೆ ಮತ್ತು ಆರೋಗ್ಯ ರಕ್ಷಣೆ’, ‘ಹೈನುಗಾರಿಕೆಯಲ್ಲಿನ ಸವಾಲುಗಳು’, ಲಾಭದಾಯಕ ಕೃಷಿಯಲ್ಲಿ ಮಾಧ್ಯಮಗಳ ಪಾತ್ರ’, ‘ಸಮಗ್ರ ಕೃಷಿ ಪದ್ಧತಿಯ ಅವಶ್ಯಕತೆ’ ಹಾಗೂ ಕರಾವಳಿಯಲ್ಲಿ ಲಾಭದಾಯಕ ತರಕಾರಿ ಬೆಳೆಗಳು ಎಂಬ ವಿಷಯದ ಬಗ್ಗೆ ಗೋಷ್ಠಿ ನಡೆಯಲಿದೆ.

ಈ ರೈತ ಸಮಾವೇಶದಲ್ಲಿ ಕೃಷಿ ಸಂಬಂಧಿತ ವಸ್ತು, ಯಂತ್ರೋಪಕರಣಗಳು, ಪತ್ರಿಕೆಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಪಾಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ದಿನೇಶ್ ಶೆಟ್ಟಿ ಹೆರ್ಗ, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಹಾಗೂ ಕೋಶಾಧಿಕಾರಿ ಪಾಡುರಂಗ ನಾಯಕ್ ಇದ್ದರು.