ಕಾರ್ಮಿಕ ಪರಿಹಾರ ಹಣ ಬಾಕಿ ಪ್ರಕರಣ: ಉಡುಪಿ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದ ವಿರುದ್ಧ ವಾರಂಟ್ ಜಾರಿಗೊಳಿಸಿದ ಜಿಲ್ಲಾ ನ್ಯಾಯಾಲಯ

ಉಡುಪಿ: ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಸ್ಟಿಸ್ ಶಾಂತವೀರ ಶಿವಪ್ಪನವರು ಶನಿವಾರ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದ, ಪುತ್ತಿಗೆ ಮಠದ ಟ್ರಸ್ಟಿಗೆ ಎರೆಸ್ಟ್ ವಾರಂಟ್ ಶೋಕಾಸ್ ನೋಟೀಸ್ ಜಾರಿ ಮಾಡಲು ಆದೇಶಿಸಿದೆ. ಉಡುಪಿ ಜಿಲ್ಲಾ ನ್ಯಾಯಾಧೀಶರ ಆದೇಶದ ಕಾರ್ಮಿಕ ಪರಿಹಾರ ಹಣ ನೀಡದೇ ಇರುವ ಹಿನ್ನಲೆಯಲ್ಲಿ ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಪ್ರತಿವಾದಿ ಪುತ್ತಿಗೆ ಮಠದ ಸುಪರ್ದಿಯಲ್ಲಿರುವ ಉಡುಪಿ ರಥಬೀದಿಯ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದ ವಿರುದ್ಧ ವಾರಂಟ್ ಹೊರಡಿಸಿದೆ.

ಫಿರ್ಯಾದಿದಾರರಾದ ಟಿ. ಸದಾನಂದ ಪೈರವರ ಪರವಾಗಿ ಉಡುಪಿಯ ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್ ವಾದಿಸಿದರು.

ಪ್ರಕರಣದ ಹಿನ್ನಲೆ: ಸುಮಾರು 10 ವರ್ಷಕ್ಕೂ ಅಧಿಕ ಅವಧಿಯಲ್ಲಿ ಉಡುಪಿ ರಥಬೀದಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ರಾತ್ರಿ ಪಾಳಯದಲ್ಲಿ ನೈಟ್ ವಾಚ್‌ಮೆನ್ ಆಗಿ ಫಿರ್ಯಾದಿದಾರ ಉಡುಪಿ, ಕೆಮ್ಮಣ್ಣು, ಬಡಾನಿಡಿಯೂರು ಅಂಚೆ ವ್ಯಾಪ್ತಿಯ ನಿವಾಸಿ ಟಿ. ಸದಾನಂದ ಪೈರವರು ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಮಿಕ ಪರಿಹಾರ ಹಣ ಸಂಪೂರ್ಣವಾಗಿ ಪಾವತಿಸದೇ ಇರುವ ಹಿನ್ನಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಸದ್ರಿ ಪ್ರಕರಣ ದಿನಾಂಕ 17.03.2022 ರಂದು ಉಡುಪಿ ರಥಬೀದಿಯ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತಾತ್ಮಕ ಟ್ರಸ್ಟಿನವರು ಟಿ. ಸದಾನಂದ ಪೈಯವರಿಗೆ ಅಸಲು ಹಣ ರೂ. 1,50,000/- ಪರಿಹಾರ ಹಣ ಹಾಗೂ 1-05-2015 ರಿಂದ 6% ಬಡ್ಡಿ ಸಮೇತ ಮೂರು ತಿಂಗಳ ಒಳಗೆ ಪಾವತಿಸಲು ಅಂದಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಸ್ಟೀಸ್ ಜೆ. ಎನ್. ಸುಬ್ರಹ್ಮಣ್ಯರವರು ಆದೇಶಿಸಿ ತೀರ್ಪು ನೀಡಿದ್ದು, ಟಿ. ಸದಾನಂದ ಪೈಯವರನ್ನು ಕೆಲಸದಿಂದ ವಜಾ ಮಾಡಿರುವುದು ಕಾನೂನು ಬಾಹಿರ ಹಾಗೂ ಅಸಮಂಜಸ ಎಂದು ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಇಂದಿನವರೆಗೂ ಫಿರ್ಯಾದಿದಾರರಾದ ಟಿ. ಸದಾನಂದ ಪೈಯವರಿಗೆ ಕಾರ್ಮಿಕ ಪರಿಹಾರ ಹಣ ಪಾವತಿಸದೇ ಇರುವ ಕಾರಣ ಈ ವಾರಂಟ್ ಹೊರಡಿಸಲಾಗಿದೆ. ಮಾನ್ಯ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾದ ಜಸ್ಟೀಸ್ ಶಾಂತವೀರ ಶಿವಪ್ಪರವರು ಮೂರು ತಿಂಗಳು ಕಾಲಾವಕಾಶ ನೀಡಿದ್ದರೂ ಸಹಾ ಹಣ ಪಾವತಿಯಾಗದಿರುವುದರಿಂದ ಎದುರುದಾರರಾದ ರಥಬೀದಿಯ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದ ವಿರುದ್ಧ ವಾರಂಟ್ ಜಾರಿ ಮಾಡಿಸಿದ್ದಾರೆ. ಫಿರ್ಯಾದಿದಾರರ ಪರ ವಕೀಲರು ಸಂಬಂಧಪಟ್ಟ ಫೀಸನ್ನು ಭರಿಸಿದ್ದು, ಸದ್ರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನ್ಯ ಉಚ್ಛ ನ್ಯಾಯಾಲಯ, ಬೆಂಗಳೂರಿನಲ್ಲಿ ತಡೆಯಾಜ್ಞೆ ಇಲ್ಲದ ಕಾರಣ ಎದುರುದಾರರಾದ ಉಡುಪಿಯ ರಥಬೀದಿಯ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದವರು ಫಿರ್ಯಾದಿದಾರರಿಗೆ ಕಾರ್ಮಿಕ ಪರಿಹಾರ ಸಂಪೂರ್ಣ ಹಣ ಪಾವತಿಸಲು ಬದ್ಧರು ಎಂದು ನ್ಯಾಯವಾದಿ ಮತ್ತು ಪಬ್ಲಿಕ್ ನೋಟರಿ ಶಿರಿಯಾರ ಪ್ರಭಾಕರ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.