ಸುಸಜ್ಜಿತ ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿ ಶೀಘ್ರದಲ್ಲೇ ಆರಂಭ: ಶಾಸಕ ರಘುಪತಿ ಭಟ್

ಉಡುಪಿ: ಮುಂದೆ ಮೆಡಿಕಲ್ ಕಾಲೇಜ್ ಆಗಿ ಪರಿವರ್ತಿಸಲು ಪೂರಕವಾಗುವಂತೆ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಜಿಲ್ಲಾಸ್ಪತ್ರೆಯನ್ನು ನಿರ್ಮಿಸಲಾಗುವುದು. ಇದರ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಸ್ಪತ್ರೆ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಜನಸಾಮಾನ್ಯರು ಸರಳವಾಗಿ ಆರೋಗ್ಯ ಸೇವೆಯನ್ನು ಪಡೆಯುವ ರೀತಿಯಲ್ಲಿ ಕಟ್ಟಡದ ನೀಲನಕ್ಷೆಯನ್ನು ತಯಾರಿಸಬೇಕು. ತುರ್ತು ಚಕಿತ್ಸಾ ಘಟಕ, ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಶಾಲೆ, ಡಯಾಲಿಸಿಸ್ ಕೇಂದ್ರ, ಐ.ಸಿ.ಯು ಕೇಂದ್ರಗಳು ನೆಲ ಮಹಡಿಯಲ್ಲೇ ನಿರ್ಮಿಸುವುದರಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು ಇದಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆ ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿಗೃಹವನ್ನು ₹ 115 ಕೋಟಿ ವೆಚ್ಚದಲ್ಲಿ 27375 ಚದರ ಮೀ. ವಿಸ್ತೀರ್ಣದಲ್ಲಿ ಕರಾವಳಿ ಭಾಗದ ಹವಾಮಾನಕ್ಕನುಗುಣವಾಗಿ ಸುಸಜ್ಜಿತ ಕಟ್ಟಡವನ್ನು ಶೀಘ್ರದಲ್ಲಿ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಹಳೆಯ ಆಸ್ಪತ್ರೆಯ ಕಟ್ಟಡವನ್ನು ಉಳಿಸಿಕೊಂಡು ನೂತನ ಕಟ್ಟಡ ನಿರ್ಮಾಣ ಆಗಲಿದೆ. ಆಸ್ಪತ್ರೆ ಹಿಂಭಾಗ ಖಾಲಿ ಇರುವ ಜಾಗವನ್ನು ಬಳಿಸಿಕೊಂಡು ಕಟ್ಟಡ ನಿರ್ಮಾಣ ಮಾಡುವುದರಿಂದ ಹಾಲಿ ಆಸ್ಪತ್ರೆಯಲ್ಲಿನ ರೋಗಿಗಳ ಚಿಕಿತ್ಸೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆ ಕಟ್ಟಡವು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.