ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ವಾರ್ಷಿಕ ಮಹಾಸಭೆ

ಉಡುಪಿ: ಉಡುಪಿ ಜಿಲ್ಲಾ ಸಹಕಾರ ಯೂನಿಯನ್ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ತೊಂದರೆ ಎದುರಾದರೆ ಅದನ್ನು ಜನಪ್ರತಿನಿಧಿಗಳ ಮೂಲಕ ಸರಿಪಡಿಸಲಾಗುವುದು. ಇದಕ್ಕೆ ಯಾವುದೇ ಸ್ಪಂದನೆ ದೊರೆಯದಿದ್ದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡಲಾಗುವುದು. ಜಿಲ್ಲೆಯಲ್ಲಿ 2.60 ಲಕ್ಷ ರೂ. ಶಿಕ್ಷಣ ನಿಧಿಯನ್ನು ಮಹಾಮಂಡಳಕ್ಕೆ ನೀಡಲಾಗಿದೆ ಎಂದರು.

ಸಹಕಾರಿ ಯೂನಿಯನ್ ನಿರ್ದೇಶಕರು, ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವ ಮೊದಲು ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸುವುದು ಸೂಕ್ತ. ಇಲ್ಲದಿದ್ದರೆ ಸಹಕಾರಿ ಕ್ಷೇತ್ರ ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗಬಹುದು ಎಂಬುವುದನ್ನು ಯೋಚಿಸಬೇಕಾಗಿದೆ. ಸರಕಾರಿಯ ಇಲಾಖೆಯ ಖಾತೆಯನ್ನು ಸಹಕಾರಿ ಬ್ಯಾಂಕ್ ಗಳಲ್ಲಿ ತೆರೆಯಲು ಅವಕಾಶ ಮಾಡಿಕೊಡಬೇಕು. ಆಗ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಚಿಂತಿಸಬಹುದು‌ ಎಂದರು.

ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಗಂಗಾಧರ ಶೆಟ್ಟಿ, ಎ. ಹರೀಶ್ ಕಿಣಿ, ಶ್ರೀಧರ್ ಪಿಎಸ್., ಸುಧೀರ್ ವೈ, ಅನಿಲ್ ಎಸ್ ಪೂಜಾರಿ, ಪ್ರಸಾದ್ ಎಸ್. ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಪ್ರದೀಪ ಯಡಿಯಾಳ, ಬಿ. ಅರುಣ್ ಕುಮಾರ್ ಹೆಗ್ಡೆ, ಬಿ. ಕರುಣಾಕರ ಶೆಟ್ಟಿ, ಕೆ. ಸುರೇಶ್ ರಾವ್ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ವರದಿ ಮಂಡಿಸಿದರು.