ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜುಲೈ 15 ರಿಂದ 29 ರ ವರೆಗೆ 14 ದಿನಗಳ ವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು. ಜಿಲ್ಲೆಯೊಳಗಿನ ಆರ್ಥಿಕ ಚಟುವಟಿಕೆಗಳನ್ನು ಎಂದಿನಂತೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಂದು ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ನಡೆದ ಚರ್ಚೆಯಂತೆ ಜುಲೈ 15ರ ಬುಧವಾರ ರಾತ್ರಿ 8 ಗಂಟೆಯಿಂದ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು. ಆದರೆ ಅಂತರ ರಾಜ್ಯ, ಅಂತರ ಜಿಲ್ಲಾ ಸರಕು ಸಾಗಾಣಿಕೆ, ವಸ್ತುಗಳ ಸಾಗಾಣಿಕೆಗೆ ಯಾವುದೇ ನಿರ್ಭಂದಗಳಿಲ್ಲ ಎಂದು ತಿಳಿಸಿದರು.
ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆ, ರಾಜ್ಯಕ್ಕೆ ಹೋಗುವವರು ಮತ್ತು ಜಿಲ್ಲೆಯೊಳಗೆ ಬರುವವರು ಜುಲೈ 15 ರ ರಾತ್ರಿ 8 ಗಂಟೆಯ ಒಳಗೆ ಬರಲು ಹಾಗೂ ಹೋಗಲು ಅವಕಾಶ ನೀಡಲಾಗಿದೆ ಹೇಳಿದರು.
ಬಸ್ ಸಂಚಾರ ಬಂದ್:
ಸೀಲ್ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಯಾವುದೇ ಸಂತೆ ಇರುವುದಿಲ್ಲ. ಯಾವುದೇ ರಾಜಕೀಯ ಧಾರ್ಮಿಕ, ಸಾಮಾಜಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಸಾರ್ವಜನಿಕವಾಗಿ ಹಬ್ಬ ಆಚರಣೆಗಳು ಮಾಡುವಂತಿಲ್ಲ. ಪೂರ್ವ ನಿರ್ಧರಿತ ಮದುವೆ ಸಮರಂಭಗಳನ್ನು ಸಂಬಂಧಿಸಿದ ತಹಶೀಲ್ದಾರ್ ಅವರಿಂಧ ಕಡ್ಡಾಯವಾಗಿ ಅನುಮತಿ ಪಡೆದು 50 ಜನಕ್ಕೆ ಮೀರದಂತೆ ನಡೆಸಬಹುದಾಗಿದೆ. ಅಂತ್ಯ ಸಂಸ್ಕಾರದಲ್ಲಿ 20 ಜನ ಮಾತ್ರ ಭಾಗವಹಿಸಬಹುದು. , ದೇವಸ್ಥಾನ, ಚರ್ಚ್, ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮತಿಗೊಳಿಸಿದ್ದು, ಈ ಸಮಯದಲ್ಲಿ ಒಮ್ಮೆಗೆ ಅರ್ಚಕರು, ಮೌಲ್ವಿಗಳು, ಧರ್ಮಗುರುಗಳು, ಭಕ್ತಾದಿಗಳು ಸೇರಿ 20 ಕ್ಕಿಂತ ಜಾಸ್ತಿ ಜನ ಇರುವಂತಿಲ್ಲ. ಯಾವುದೇ ವಿಶೇಷ ಪೂಜೆಗಳು, ದಾರ್ಮಿಕ ಆಚರಣೆಗಳು ಇರುವುದಿಲ್ಲ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಮಾಲೀಕರೇ ನಿರ್ಧರಿಸಿದ್ದಲ್ಲಿ ಜಿಲ್ಲಾಡಳಿತದ ಅಭ್ಯಂತರ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸರಕಾರದ ನಿರ್ದೇಶನದಂತೆ ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಇರಲಿದ್ದು, ಕೇವಲ ಮೆಡಿಕಲ್, ಕ್ಲಿನಿಕಲ್ ಲ್ಯಾಬ್, ಆಸ್ಪತ್ರೆ, ಹಾಲು, ದಿನಪತ್ರಿಕೆ ಮಾರಾಟಕ್ಕೆ ನಿರ್ಭಂದವಿಲ್ಲ, ಹೋಟೆಲ್ ಗಳಿಂದ ಪಾರ್ಸೆಲ್ ಗಳಿಗೆ , ಫುಡ್ ಡೆಲಿವರಿಗೆ ಅವಕಾಶವಿದೆ ಎಂದು ಡಿಸಿ ಜಿ. ಜಗದೀಶ್ ಹೇಳಿದರು.
ತುರ್ತು ಸಂದರ್ಭದಲ್ಲಿ ಜಿಲ್ಲೆಯಿಂದ ಹೊರ ಹೋಗಲು ಮತ್ತು ಪ್ರತಿನಿತ್ಯದ ಕೆಲಸಗಳಿಗೆ ಜಿಲ್ಲೆಗೆ ಆಗಮಿಸುವವರಿಗೆ ಪಾಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.