ಉಡುಪಿ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಬಿಲ್ಲವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜನ್ಮದಿನಾಚರಣೆ ಪ್ರಯುಕ್ತ “ಗುರು ಸಂದೇಶ ಸಾಮರಸ್ಯ ಜಾಥಾ” ವನ್ನು ಇದೇ ಸೆ.21ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 2ಗಂಟೆಗೆ ಬನ್ನಂಜೆ ಜಯಲಕ್ಷ್ಮೀಯ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಸುವರ್ಣ ಮತ್ತು ದೈವ ನರ್ತಕರವಿ ಪಡ್ಡಂ ಅವರು ಗುರು ಸಂದೇಶ ಸಾಮರಸ್ಯ ರಥಕ್ಕೆ ಚಾಲನೆ ನೀಡಲಿದ್ದಾರೆ. ಸಂಸದರು, ಶಾಸಕರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಉಡುಪಿ ಎಲ್ಲ ಬಿಲ್ಲವ ಸಂಘ ಸಂಸ್ಥೆಗಳ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬನ್ನಂಜೆ ಜಯಲಕ್ಷ್ಮೀ ಎದುರುಗಡೆಯಿಂದ ಆರಂಭಗೊಳ್ಳುವ ಜಾಥವು, ಸಿಟಿ ಬಸ್ಟ್ಯಾಂಡ್, ಕೋರ್ಟ್ ರೋಡ್, ಮಿಷನ್ ಕಾಂಪೌಂಡ್, ಬೈಲೂರು ಮಹಿಷಮರ್ದಿನಿ ದೇವಸ್ಥಾನ, ಕೊರಂಗ್ರಪಾಡಿ- ಮಾರ್ಪಳ್ಳಿ ಕುಕ್ಕಿಕಟ್ಟೆ – ಅಲೆವೂರು – ರಾಂಪುರ – ದೆಂದೂರು ಕಟ್ಟೆ – ಮಣಿಪುರ ಮಾರ್ಗದ ಮೂಲಕ ಸಾಗಿಬಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಗೌರವಾಧ್ಯಕ್ಷ ದಿವಾಕರ್ ಸನಿಲ್, ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಮಲ್ಪೆ, ವಿಜಯ್ ಕೋಟ್ಯಾನ್, ಗೌರವ ಸಲಹೆಗಾರ ಸುಧಾಕರ್ ಡಿ. ಅಮೀನ್ ಉಪಸ್ಥಿತರಿದ್ದರು.












