ಕೇಂದ್ರ, ರಾಜ್ಯ ಸರ್ಕಾರದಿಂದ ಜಿಲ್ಲೆಯ ಸಂಪೂರ್ಣ ನಿರ್ಲಕ್ಷ್ಯ: ಆರೋಪ

ಉಡುಪಿ: ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಅನುದಾನ ಹಂಚಿಕೆ, ಅಭಿವೃದ್ಧಿ ಕಾಮಗಾರಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಎರಡು ಸರ್ಕಾರಗಳು ಜಿಲ್ಲೆಗೆ ಅನ್ಯಾಯ ಮಾಡುತ್ತಿವೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್‌ ಪೂಜಾರಿ ಸಾಲಿಗ್ರಾಮ ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಿಲ್ಲೆಯ ಮರಳು ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾ ಸಮಿತಿ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಬಳಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಾರಿಯೂ ಅವರೇ ಅಭ್ಯರ್ಥಿಯಾದರೆ ನಾವು ಮತದಾನ ಬಹಿಷ್ಕರಿಸುತ್ತೇವೆ. ಶೋಭಾ ಕರಂದ್ಲಾಜೆ ಅವರಿಗೆ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ ಎಂದರು.

ಸಂಸದೆ ಶೋಭಾ ಅವರು ಏಳು ಮಂದಿ ಮೀನುಗಾರರು ನಾಪತ್ತೆ ಆದಂತಹ ಸಂದರ್ಭದಲ್ಲಿಯೂ ಯಾವುದೇ ಸಹಕಾರ ನೀಡಿಲ್ಲ. ಮರಳಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿಲ್ಲ. ಅವರು ಸಮಸ್ಯೆಯನ್ನು ಹೆಚ್ಚು ಮಾಡಿದ್ದಾರೆಯೇ ಹೊರತು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಶೋಭಾ ಅವರಿಗೆ ಬೆಂಬಲ ನೀಡುವುದಿಲ್ಲ. ಆದರೆ ನಮಗೆ ಬಿಜೆಪಿ ಪಕ್ಷದ ಬಗ್ಗೆ ಯಾವುದೇ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮರಳಿನ ಸಮಸ್ಯೆಯಿಂದಾಗಿ ಕೂಲಿಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡವರಿಗೆ ಮನೆ ಕಟ್ಟಲು ತೊಂದರೆ ಆಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಇದೆ. ಆದರೆ ಅದನ್ನು ತೆಗೆಯಲು ಅವಕಾಶ ಇಲ್ಲ. ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 90 ದಿನಗಳು ಕಳೆದಿವೆ. ಆದರೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಮೀನುಗಾರರನ್ನು ಹುಡುಕಿಕೊಡುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೀನುಗಾರರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು
ಎಂದು ಒತ್ತಾಯಿಸಿದರು.

ಜಯಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ ಶೆಟ್ಟಿ ಬಾರ್ಕೂರು, ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ ಕುಂದಾಪುರ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್‌, ಪದಾಧಿಕಾರಿಗಳಾದ ಬಿ. ಸುಧಾಕರ ರಾವ್‌ ಬಾರ್ಕೂರು, ಕರುಣಾಕರ ಪೂಜಾರಿ, ಗಣೇಶ್‌ ರಾಜ್‌ ಮೊಗವೀರ, ಅಣ್ಣಪ್ಪ ಕುಲಾಲ್‌, ಹರೀಶ್‌ ಶೆಟ್ಟಿ, ಮಹೇಶ್‌ ಕೋಟ್ಯಾನ್‌, ರತ್ನಾಕರ ಮೊಗವೀರ, ಗಿರೀಶ್‌ ಕಲ್ಮಾಡಿ, ಕರುಣಾಕರ ಮಾರ್ಪಳ್ಳಿ, ವಿವೇಕ್‌ ಕಲ್ಮಾಡಿ, ಮಹೇಶ್‌ ಮಣಿಪಾಲ, ಶ್ರೀನಿವಾಸ ಶೆಟ್ಟಿ ತೋನ್ಸೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.