ಉಡುಪಿ: ಜಿಲ್ಲೆಯ ಮರಳಿನ ಸಮಸ್ಯೆ ಬಗೆಹರಿಯಬೇಕು. ಇಲ್ಲದಿದ್ದರೆ ಮತದಾನ
ಪ್ರತಿಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಟಪಾಡಿ ಟೆಂಪೋ ಹಾಗೂ ಲಾರಿ ಮಾಲೀಕರ ಸಂಘದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಜಿಲ್ಲಾಡಳಿತ ಮರಳು ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಮತ ಹಾಕುವುದು ಬಿಡುವುದು ನಮ್ಮ ವೈಯಕ್ತಿಕ ವಿಚಾರ. ಮತ ಹಾಕದಿದ್ದರೆ ನಿಮ್ಮ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಡಿಸಿ ಹೇಳುತ್ತಾರೆ. ಅವರು ಕ್ರಮ ಜರುಗಿಸಲಿ. ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ. ಅಲ್ಲಿಯಾದರೂ ನಾವು ನೆಮ್ಮದಿಯಿಂದ ಬದುಕುತ್ತೇವೆ. ಮರಳು ಸಮಸ್ಯೆಯನ್ನು ಶೀಘ್ರ ಬಗೆಹರಿಯಬೇಕು. ಇಲ್ಲದಿದ್ದರೆ ನಾವು ಜೀವ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮರಳು ಧಕ್ಕೆಯಲ್ಲಿ ಸಿಸಿಟಿವಿ ಅಳವಡಿಸಿ, ಆಗ ಯಾರು ಅಕ್ರಮ ಮರಳುಗಾರಿಕೆ
ನಡೆಸುತ್ತಿದ್ದಾರೆ ಎಂಬುವುದು ಬಹಿರಂಗಗೊಳ್ಳುತ್ತದೆ. ಜಿಲ್ಲಾಧಿಕಾರಿಗಳ ಹಿಂದೆ ಕಾಣದ
ಕೈ ಕೆಲಸ ಮಾಡುತ್ತಿದೆ. ಲಂಚ ಸ್ವೀಕರಿಸುವ ಮೂಲಕ ಜಿಲ್ಲಾಡಳಿತವೇ ನೇರವಾಗಿ
ಅಕ್ರಮಗಳಿಗೆ ಪೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಜನರ ಸಮಸ್ಯೆಯನ್ನು ನಿವಾರಿಸುವಲ್ಲಿ ವಿಫಲರಾಗಿದ್ದಾರೆ.
ನಾವು ಮತ ಹಾಕಿ ಜನಪ್ರತಿನಿಧಿಗಳನ್ನು ಗೆಲ್ಲಿಸುವುದು ಎಸಿ ರೂಮ್ನಲ್ಲಿ ಕೂತು
ಗಮ್ಮತ್ ಮಾಡಲಿಕ್ಕಲ್ಲ. ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರು ಮರಳಿನ ವಿಚಾರ ಕೇಳಿದರೆ ಮುಖ ತಿರುಗಿಸುತ್ತಾರೆ. ಇವರಿಗೆ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಇವರು ಜನಪ್ರತಿನಿಧಿಗಳಾಗಿ ಇದ್ದು ಏನು ಪ್ರಯೋಜನ?. ಬಡಜನರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲದಿರುವ ಇಂತಹ ಜನಪ್ರತಿನಿಧಿಗಳು ಸಚಿವ ಸ್ಥಾನದಲ್ಲಿ ಮುಂದುವರಿಯಲು ಅನಾರ್ಹರು ಎಂದು ಸಚಿವೆ ಜಯಮಾಲ ವಿರುದ್ಧ ಕಿಡಿಕಾರಿದರು.
ಮರಳು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಸತ್ಯಜಿತ್ ಬಿರ್ತಿ ಮಾತನಾಡಿ, ಜಿಲ್ಲೆಯ ಮರಳಿನ ವಿಚಾರದಲ್ಲಿ ಅಧಿಕಾರಿಗಳೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳ ಮಾತಿಗೆ ಕಿಮ್ಮತ್ತಿಲ್ಲ. ಹಾಗಾಗಿ ಮರಳಿನ ಸಮಸ್ಯೆ ಬಗೆಹರಿಯುವ ತನಕ ಸ್ವಯಂ ಪ್ರೇರಿತರಾಗಿ ಕುಟುಂಬದ ಎಲ್ಲ ಸದಸ್ಯರು ಮತ ಹಾಕದಿರಲು ನಿರ್ಧರಿಸಿದ್ದೇವೆ
ಎಂದರು. ಜಿಲ್ಲಾ ಲಾರಿ ಮತ್ತು ಟೆಂಪೋ ಮಾಲೀಕರ ಸಂಘದ ಅಧ್ಯಕ್ಷ ಪ್ರವೀಣ್ ಸುವರ್ಣ, ಕಟಪಾಡಿ ಲಾರಿ–ಟೆಂಪೋ ಮಾಲೀಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಇದ್ದರು.
ಕಾನೂನು ಮೀರಿ ಕ್ರಮ ಸಾಧ್ಯವಿಲ್ಲ:
ಮರಳಿನ ವಿಚಾರದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ. ಒಂದೆರಡು ಮಂದಿ ಮತದಾನ ಬಹಿಷ್ಕರಿಸಿದ್ದರೆಂಬ ಕಾರಣಕ್ಕೆ ಕಾನೂನು ಉಲ್ಲಂಘಿಸಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಒಬ್ಬರ ವೈಯಕ್ತಿಕ ಅಥವಾ ಸಂಘಟನೆಯ ಬೇಡಿಕೆಯಂತೆ ಕಾನೂನು ಮೀರಿ ಕೆಲಸ ಮಾಡಲು ಆಗುವುದಿಲ್ಲ. ಅದಕ್ಕಾಗಿ ಒತ್ತಾಯ ಮಾಡುವ ಅಧಿಕಾರ ಕೂಡ ಯಾರಿಗೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಮತದಾನವನ್ನು ಬಹಿಷ್ಕಾರ ಮಾಡಬಾರದು. ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಂದು ಮನವಿ ಮಾಡಿದರು.