ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ ಕೇಂದ್ರ ಬಜೆಟ್ ದೂರದರ್ಶಿತ್ವದ ಚಿಂತನೆಯೊಂದಿಗೆ ಅಭಿವೃದ್ಧಿ ಪರ ಅತ್ಮನಿರ್ಭರ ಬಜೆಟ್ ಆಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉತ್ಪಾದಕತೆ, ಹಣಕಾಸು ಹೂಡಿಕೆ, ಹವಾಮಾನ ಕ್ರಮ ಮತ್ತು ಪಿಎಂ ಗತಿಶಕ್ತಿ ಯೋಜನೆ ಈ ನಾಲ್ಕು ಪ್ರಮುಖ ಆಯಾಮಗಳಲ್ಲಿ ರೂಪಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ.
ರಸ್ತೆಗಳ ನಿರ್ಮಾಣಕ್ಕೆ ಒತ್ತು, ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ, ಕೈಗಾರಿಕೆ, ಸಾವಯವ ಕೃಷಿ, ಕೌಶಲ್ಯಾಭಿವೃದ್ಧಿ, ಮನೆ ಮನೆಗೆ ನಳ್ಳಿ ನೀರು, ದೇಶದ 5 ನದಿಗಳ ಜೋಡಣೆ, ಹೆಚ್ಚುವರಿ ರೈಲು, ರೈಲ್ವೇ ನಿಲ್ದಾಣದ ಉನ್ನತೀಕರಣ, ಡಿಜಿಟಲ್ ಆರ್ಥಿಕತೆ, ಕನಿಷ್ಠ ಬೆಂಬಲ ಬೆಲೆ, ಡಿಜಿಟಲ್ ಯೂನಿವರ್ಸಿಟಿ, ಒನ್ ನೇಷನ್ ಒನ್ ರಿಜಿಸ್ಟ್ರೇಷನ್, ವಿವಿಧ ಕ್ಷೇತ್ರಗಳ ಡಿಜಿಟಲೀಕರಣ, ಪಿಎಂ ಆವಾಜ್ ಯೋಜನೆಯಡಿ ಮನೆ ನಿರ್ಮಾಣ, ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ, ಇ-ಪಾಸ್ ಪೋರ್ಟ್, ಮಹಿಳಾ ಸಬಲೀಕರಣ, ಅಂಗನವಾಡಿಗಳ ಉನ್ನತೀಕರಣ, ವಿವಿಧ ಇಲಾಖೆಗಳಲ್ಲಿ ಆತ್ಮನಿರ್ಭರತೆ, ಮೇಕ್ ಇನ್ ಇಂಡಿಯಾ, ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ವರೆಗೆ ಬಡ್ಡಿ ರಹಿತ ಸಾಲ, ಅಮೃತ ಸ್ಕೀಂ ಅಡಿಯಲ್ಲಿ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಇವೇ ಮುಂತಾದ ಸಕಾರಾತ್ಮಕ ಅಂಶಗಳು ಈ ಬಾರಿಯ ಕೇಂದ್ರ ಬಜೆಟ್ ನ ವಿಶೇಷತೆಗಳಾಗಿವೆ.
ಹಲವಾರು ಅಗತ್ಯ ವಸ್ತುಗಳ ಬೆಲೆ ಹಾಗೂ ಸುಂಕ ಇಳಿಕೆ ಸ್ವಾಗತಾರ್ಹವಾಗಿದೆ. ವಿವಿಧ 14 ಕ್ಷೇತ್ರಗಳಲ್ಲಿ ಉತ್ಪಾದಕತೆಗೆ ಪೂರಕ ಹೂಡಿಕೆ ಅವಕಾಶವು ಹೊಸ ಉದ್ಯೋಗ ಸೃಷ್ಟಿಯ ಜೊತೆಗೆ 30 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹೊಸ ಉತ್ಪಾದಕತೆಗೆ ಒತ್ತು ನೀಡಲಿದೆ.
ಆರೋಗ್ಯ, ಶಿಕ್ಷಣ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿರುವ ಜೊತೆಗೆ ಜಿಡಿಪಿಯ ಶೇ.35ನ್ನು ಮೂಲಸೌಕರ್ಯ ಕ್ಷೇತ್ರಕ್ಕೆ ಮೀಸಲಿರಿಸಿರುವುದು ಅಶಾದಾಯವಾಗಿದೆ.
ದೇಶದ ಭದ್ರತೆಯ ಜೊತೆಗೆ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಮೂಂಚೂಣಿಗೆ ತರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ದಾಪುಗಾಲು ಹಾಕುವ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಬಜೆಟ್ ದೂರದರ್ಶಿತ್ವದ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್ ಆಗಿ ಹೊರ ಹೊಮ್ಮಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












