ಮದ್ಯದಂಗಡಿಗೆ ಮುಗಿಬಿದ್ದ ಜನತೆ: ಉಡುಪಿ ಜಿಲ್ಲೆಯಾದ್ಯಂತ ಇದೇ ಕತೆ

ಉಡುಪಿ: ಜಿಲ್ಲೆಯಾದ್ಯಂತ ಇಂದಿನಿಂದ ಮದ್ಯ ಮಾರಾಟಕ್ಕೆ ಚಾಲನೆ ಸಿಕ್ಕಿದ್ದು, ಪಾನಪ್ರಿಯರು ಮುಗಿಬಿದ್ದು ಮದ್ಯ ಖರೀದಿಸಿದರು.
ಕಟಪಾಡಿ, ಪಡುಬಿದ್ರಿ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಬೈಂದೂರು, ಹಿರಿಯಡ್ಕ, ಮಲ್ಪೆ, ಉಡುಪಿಯ ಕಲ್ಸಂಕ, ಬನ್ನಂಜೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿರುವ ಮದ್ಯ ಮಾರಾಟ ಮಳಿಗೆಗಳಲ್ಲಿ ಜನ ಉರಿ ಬಿಸಿಲನ್ನು ಲೆಕ್ಕಿಸದೆ ಮೀಟರ್ ಗಟ್ಟಲೆ ದೂರದವರೆಗೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯ ಎಲ್ಲ ಕಡೆ ಸಾಮಾನ್ಯವಾಗಿತ್ತು.
ಜಿಲ್ಲೆಯಲ್ಲಿ 14 ಎಂಎಸ್ಐಎಲ್ ಮಳಿಗೆ ಹಾಗೂ 89 ವೈನ್ ಶಾಪ್ ಗಳು ಸೇರಿದಂತೆ ಒಟ್ಟು 103 ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 9 ಗಂಟೆಯಿಂದ ಮದ್ಯ ಮಾರಾಟ ಪ್ರಕ್ರಿಯೆ ಆರಂಭಗೊಂಡಿದ್ದು, ಮದ್ಯಪ್ರಿಯರು ಮುಂಜಾನಯೇ ಮದ್ಯ ಮಾರಾಟ ಮಳಿಗೆಗಳ ಮುಂದೆ ಕ್ಯೂ ನಿಂತ ದೃಶ್ಯಗಳು ಕಂಡುಬಂದಿವು.
ನಗರದ ಕೆಲವು ವೈನ್ ಶಾಪ್ ಗಳಲ್ಲಿ ಜನರು ಮದ್ಯ ಖರೀದಿಸಿಲು ಮುಗಿಬಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಠಾಣೆ ಪೊಲೀಸರು ಲಾಠಿ ಹಿಡಿದು ದೂರ ನಿಲ್ಲಿಸಿ, ಸುರಕ್ಷತಾ ಅಂತರ ಕಾಪಾಡುವಂತೆ ಸೂಚಿಸಿದರು. ಅಕ್ರಮಗಳು ಮತ್ತು ನಿಯಮ ಉಲ್ಲಂಘನೆ ತಡೆಯುವ ಉದ್ದೇಶದಿಂದ ಅಬಕಾರಿ ಇಲಾಖೆ ಏಳು ತಂಡಗಳನ್ನು ರಚಿಸಿದ್ದು, ಜಿಲ್ಲೆಯಾದ್ಯಂತ ಗಸ್ತು ತಿರುಗವ ಕಾರ್ಯ ನಡೆಸುತ್ತಿದೆ.