ಭಾರತ ಬಂದ್ ಹಿನ್ನೆಲೆ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಉತ್ತಮ ಪ್ರತಿಕ್ರಿಯೆ, ಉಳಿದೆಡೆ ಸಾಧಾರಣ ಬಂದ್

ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹತ್ತಕ್ಕೂ ಅಧಿಕ ಕೇಂದ್ರ ಕಾರ್ಮಿಕ ಒಕ್ಕೂಟಗಳು ಜ. 8 ಮತ್ತು 9 ರಂದು ಎರಡು ದಿನಗಳ ಕಾಲ ಕರೆ ನೀಡಿರುವ ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಸಾದಾರಣ ಬೆಂಬಲ ವ್ಯಕ್ತವಾಗಿದೆ.ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ ವಿವಿದೆಡೆ ವಿದ್ಯಾರ್ಥಿಗಳ ಚಲನವಲನ ಕಂಡುಬರಲಿಲ್ಲ. ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳ ಮಾಲಿಕರು ಅಂಗಡಿ ತೆರೆಯದೇ ಬಂದ್ ಗೆ ಬೆಂಬಲ ಸೂಚಿಸಿದರು. ಕೆಎಸ್ಸಾಆರ್ಟಿಸಿ ಬಸ್ ಗಳು ಬೀದಿಗಿಳಿಯಲಿಲ್ಲ, ಖಾಸಗಿ ಬಸ್ ಗಳ ಓಡಾಟವೂ ಕಡಿಮೆ ಇತ್ತು. ಕೆಲವೆಡೆ ಆಟೋ ಸೇವೆಗಳು ಲಭ್ಯವಿತ್ತು.

ಕುಂದಾಪುರ ಹೋರಾಟಗಾರರ ಮನವಿಗೆ ಸ್ಪಂದಿಸಿದ ವರ್ತಕರು.     ಕುಂದಾಪುರದಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ. ಬೆರಳೆಣಿಕೆಯಷ್ಟು ಖಾಸಗಿ ಬಸ್ ಗಳು ಆಟೋ ರಿಕ್ಷಾ ಓಡಾಡಿವೆ. ಅಂಗಡಿಗಳು ಸಂಪೂರ್ಣ ಮುಚ್ಚಿವೆ.  ತೆರೆದಿರುವ ಅಂಗಡಿಯವರನ್ನು ಪ್ರತಿಭಟನಾಕಾರರು ಮನವಿ ಮಾಡಿ ಅಂಗಡಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಕುಂದಾಪುರ ಸ್ತಬ್ಧವಾಗಿದೆ.

ಕಾರ್ಕಳದಲ್ಲಿ ಸಾಧಾರಣ ಬಂದ್: ಕಾರ್ಕಳದಲ್ಲಿ ಒಂದೆರಡು ಬಸ್ ಗಳು ದೂರದೂರುಗಳಿಂದ ಬಂದು ನಿಲುಗಡೆಗೊಂಡವು ಬಿಟ್ಟರೆ ಬೇರ್ಯಾವ ಬಸ್ ಗಳು ಪಯಣ ಹೊರಡಲಿಲ್ಲ. ಅಲ್ಲಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ ಆಗಿತ್ತು. 

ಉಳಿದಂತೆ ಕಾಪು, ಪಡುಬಿದ್ರಿ, ಬ್ರಹ್ಮಾವರಗಳಲ್ಲಿಯೂ  ಜನ ಓಡಾಟ ಕಡಿಮೆಯಾಗಿ, ತೆರೆದಿದ್ದ ಬಹುತೇಕ ಅಂಗಡಿಗಳಿಗೆ ವ್ಯಾಪಾರವೂ ಆಗದೇ ಅಂಗಡಿಗಳು ಬಿಕೋ ಎನ್ನುತ್ತಿತ್ತು.   ಈ ವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದೇ ಜಿಲ್ಲೆ ಶಾಂತವಾಗಿರುವುದು ಸಮಾಧಾನದ ಸಂಗತಿ.