ಉಡುಪಿ: ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಸಂಚಾರಿ ಪೊಲೀಸರು ತಡೆದು ನಿಲ್ಲಿಸಿ, ಫೈನ್ ಹಾಕಲು ಮುಂದಾದಾಗ ಆತ ಪೊಲೀಸರಿಗೆ ಆವಾಜ್ ಹಾಕಿದ ಘಟನೆ ಉಡುಪಿಯ ಕಲ್ಸಂಕ ಜಂಕ್ಷನ್ ಬಳಿ ಇಂದು ನಡೆದಿದೆ.
ಆಂಧ್ರಪ್ರದೇಶ ಮೂಲದ ಅನುರಾಗ ರೆಡ್ಡಿ ಎಂಬಾತ ಪೊಲೀಸರಿಗೆ ಆವಾಜ್ ಹಾಕಿದ ವಿದ್ಯಾರ್ಥಿ. ಈತ ಮಣಿಪಾಲ ವಿವಿಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾನೆ.
ಪೊಲೀಸರು ಈತನ ಕಾರು ನಿಲ್ಲಿಸಿ ಪರಿಶೀಲನೆ ನಡೆಸಿದ್ದು, ಆಲ್ಕೋಮೀಟರ್ ನಲ್ಲಿ ಕುಡಿತದ ಪ್ರಮಾಣ ಪತ್ತೆಯಾಗಿದೆ. ಹೀಗಾಗಿ ಕಾನೂನಿನಂತೆ ಪೊಲೀಸರು ದಂಡ ಹಾಕಲು ಮುಂದಾಗಿದ್ದಾರೆ. ಆಗ ವಿದ್ಯಾರ್ಥಿ ಪೊಲೀಸರ ಎದುರು ವಾಗ್ವಾದ ನಡೆಸಿದ್ದಾನೆ.
ಅಲ್ಲದೆ, ನನ್ನ ತಂದೆ ಆಂಧ್ರದ ಸಂಸದ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ನನ್ನ ತಂದೆ ಗೆಳೆಯರು. ನಮ್ಮಪ್ಪ ಸಿದ್ದರಾಮಯ್ಯನವರ ರೈಟ್ ಹ್ಯಾಂಡ್ ಗೆಳೆಯ. ನಾನು ಅವರಿಗೆ ಕರೆ ಮಾಡುತ್ತೇನೆ. ನೀವು ಅವರಲ್ಲೇ ಮಾತಾಡಿ ಎಂದು ಆವಾಚ್ ಹಾಕಿದ್ದಾನೆ. ಹಾಗೆ ನಾನು ಯಾವುದೇ ಕಾರಣಕ್ಕೂ ₹ 3 ಸಾವಿರಕ್ಕಿಂತ ಹೆಚ್ಚಿನ ದಂಡ ಕಟ್ಟುವುದಿಲ್ಲವೆಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.
ಅನುರಾಗ್ ಆವಾಜ್ ಗೆ ಜಗ್ಗದ ಪೊಲೀಸರು, ಆತನ ಕಾರು ಸೀಜ್ ಮಾಡಿದ್ದು, ಆತನ ಮೇಲೆ ಕುಡಿದು ವಾಹನ ಚಾಲನೆ, ಅತೀವೇಗದ ವಾಹನ ಚಾಲನೆ ಪ್ರಕರಣ ದಾಖಲಿಸಿದ್ದಾರೆ.