ಉಡುಪಿ:ಜಿಲ್ಲೆಯ 2,72,477 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

ಉಡುಪಿ: ಜಿಲ್ಲೆಯಲ್ಲಿ ಫೆಬ್ರವರಿ 10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವಾಗಿ ಆಚರಿಸಲಾಗುತ್ತಿದ್ದು, 1 ರಿಂದ 19
ವರ್ಷದೊಳಗಿನ ಮಕ್ಕಳಲ್ಲಿ ಜಂತುಹುಳ ಕಾಣಿಸಿಕೊಳ್ಳುತ್ತಿರುವುದರಿಂದ ಇದರ ನಿವಾರಣೆಗಾಗಿ ಉಡುಪಿ ತಾಲೂಕಿನಲ್ಲಿ 1,35,244, ಕುಂದಾಪುರ
ತಾಲೂಕಿನಲ್ಲಿ 87,320 ಹಾಗೂ ಕಾರ್ಕಳ ತಾಲೂಕಿನಲ್ಲಿ 49,913 ಸೇರಿದಂತೆ ಒಟ್ಟು 2,72,477 ಮಕ್ಕಳಿಗೆ ಅಲ್‌ಬೆಂಡಾಝೋಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುವುದು.

ಈ ಮಾತ್ರೆಯನ್ನು ಮಧ್ಯಾಹ್ನ ಊಟದ ನಂತರ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರ
ಉಪಸ್ಥಿತಿಯಲ್ಲಿ ನೀಡಲಾಗುವುದು. ಶಿಕ್ಷಕರು, ಬಿಸಿಯೂಟ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯವರಿಗೆ ಕೂಡಾ ಮಾತ್ರೆಯನ್ನು ನೀಡಲಾಗುತ್ತದೆ.

ಹೊಟ್ಟೆ ಹುಳಗಳ ತೊಂದರೆಯಿಂದ ರಕ್ತಹೀನತೆ, ಪೌಷ್ಠಿಕ ಆಹಾರದ ಕೊರತೆ ಉಂಟಾಗುತ್ತಿದ್ದು, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ತೊಂದರೆ ಕಾಣಿಸಿಕೊಳ್ಳಬಹುದು. ಅಲ್‌ಬೆಂಡಾಝೋಲ್ ಮಾತ್ರೆ ನೀಡುವುದರಿಂದ ಹೊಟ್ಟೆ ಹುಳಗಳ ನಾಶವಾಗುತ್ತವೆ.

ಈ ಕಾರ್ಯಕ್ರಮದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಅಂಗನವಾಡಿ, ರೆಸಿಡೆನ್ಶಿಯಲ್ ಸ್ಕೂಲ್, ಐ.ಟಿ.ಐ, ಟೆಕ್ನಿಕಲ್ ಇನ್ಸ್ಟಿಟ್ಯೂಟ್, ನರ್ಸಿಂಗ್ ಕಾಲೇಜು, ಡಿಗ್ರೀ ಕಾಲೇಜು ವಿದ್ಯಾರ್ಥಿಗಳು,
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಆಯಾಯ ಶಾಲೆ/ ಕಾಲೇಜುಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೆ ಮತ್ತು ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಅಲ್‌ಬೆಂಡಾಝೋಲ್ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದೆ.

1 ರಿಂದ 2 ವರ್ಷದೊಳಗಿನ ಮಕ್ಕಳಿಗೆ 1/2 ಮಾತ್ರೆ ಹಾಗೂ 2-19 ವರ್ಷದ ವಯಸ್ಸಿನವರಿಗೆ ಇಡೀ ಮಾತ್ರೆ ನೀಡಲಾಗುತ್ತದೆ. ಚಿಕ್ಕ ಮಕ್ಕಳಿಗೆ ಮಾತ್ರೆಯನ್ನು ಹುಡಿ ಮಾಡಿ ನೀರಿನೊಂದಿಗೆ ಸೇವಿಸಲು ಅಥವಾ ಚೀಪಿ ಸೇವಿಸುವಂತೆ ಕ್ರಮವಹಿಸಲು ತರಬೇತಿ ನೀಡಲಾಗಿದ್ದು, ಫೆಬ್ರವರಿ 10 ರಂದು ಬಿಟ್ಟು ಹೋದ ಮಕ್ಕಳಿಗೆ ಫೆ. 16 ರಂದು ಮೋಪ್ ಅಪ್ ದಿನದಂದು ಮಾತ್ರೆಗಳನ್ನು ನೀಡಲಾಗುವುದು. ಸೌಖ್ಯವಿಲ್ಲದ ಮಕ್ಕಳಿಗೆ ಗುಣಮುಖರಾದ ನಂತರ ಅಲ್‌ಬೆಂಡಾಝೋಲ್ ಮಾತ್ರೆ ನೀಡಲಾಗುತ್ತದೆ.

ಬೇರೆ ಯಾವುದೇ ಔಷಧಿ ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಮಾತ್ರೆಯನ್ನು ಸೇವಿಸಬೇಕು. ಆಶಾ ಕಾರ್ಯಕರ್ತೆಯರ ಮೂಲಕ ಶಾಲೆಯಿಂದ ಹೊರಗಿರುವ 1 ರಿಂದ 19 ವರ್ಷದ ಒಳಗಿರುವ ಮಕ್ಕಳನ್ನು ಪಟ್ಟಿ ಮಾಡಿ, ಪಟ್ಟಿಯಲ್ಲಿರುವ ಎಲ್ಲಾ ಮಕ್ಕಳನ್ನು
ಅಂಗನವಾಡಿಗೆ ಬರುವಂತೆ ಮಾಡಿ ಮಾತ್ರೆ ನೀಡಲಾಗುತ್ತದೆ.
ಜಂತುಹುಳ ಭಾದೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ತರಾಗಿ ಶಾಲೆಗಳಿಗೆ ಗೈರು ಹಾಜರಾಗುವುದು ಅಥವಾ ತರಗತಿಯಲ್ಲಿ ಪಾಠದ ಬಗ್ಗೆ ಏಕಾಗ್ರತೆ ಹೊಂದಲು ವಿಫಲರಾಗುತ್ತಾರೆ ಜೊತೆಗೆ ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗಬಹುದು. ಇದರಿಂದ ರಕ್ಷಿಸಲು ಅಲ್‌ಬೆಂಡಾಝೋಲ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ.

ಜಂತುಹುಳ ಭಾದೆ ಹರಡುವ ರೀತಿ : ನೈರ್ಮಲ್ಯತೆಯ ಕೊರತೆ ಹಾಗೂ ವೈಯುಕ್ತಿಕ ಶುಚಿತ್ವದ ಕೊರತೆಯಿಂದ ಹಾಗೂ ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಜಂತುಹುಳ ಭಾದೆ ಬರಲಿದ್ದು, ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವುದು ಹಾಗೂ ಸುಸ್ತು, ತೂಕದಲ್ಲಿ ಇಳಿಕೆ, ವಾಕರಿಕೆ, ವಾಂತಿ,ರಕ್ತ ಹೀನತೆ ಇವು ಜಂತುಹುಳು ಭಾದೆಯ ಲಕ್ಷಣಗಳಾಗಿವೆ. ಜಂತುಹುಳ ಸಂಖ್ಯೆ ಕಡಿಮೆ ಇದ್ದವರಲ್ಲಿ ಯಾವುದೇ ತೊಂದರೆಗಳು ಕಾಣಿಸದಿರಲೂಬಹುದು.

ಜಂತುಹುಳ ಭಾದೆ ನಿವಾರಣೆಯ ಉಪಯೋಗಗಳು: ರಕ್ತಹೀನತೆಯನ್ನು ತಡೆಗಟ್ಟುವುದು, ಪೌಷ್ಠಿಕತೆಯಲ್ಲಿ ಸುಧಾರಣೆ, ರೋಗ ನಿರೋಧಕ ಶಕ್ತಿ
ಹೆಚ್ಚಾಗುವುದು ಹಾಗೂ ಏಕಾಗ್ರತೆ, ಕಲಿಕೆಯ ಶಕ್ತಿ ಹಾಗೂ ಶಾಲಾ ಹಾಜರಾತಿ ಸುಧಾರಿಸುತ್ತದೆ.

ಜಂತುಹುಳ ಭಾದೆಯಿಂದ ರಕ್ಷಿಸಿಕೊಳ್ಳಲು ಪೂರಕವಾದ ಇತರೆ ಮಾರ್ಗಗಳು: ಕೈಗಳ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಸ್ಚಚ್ಛವಾಗಿಡುವುದು, ಪಾದರಕ್ಷೆ ಧರಿಸಿ ಹೊರಗಡೆ ಓಡಾಡುವುದು, ಊಟ/ತಿಂಡಿ ಮಾಡುವ ಮೊದಲು ಹಾಗೂ ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಶುದ್ಧೀಕರಿಸಿದ ನೀರನ್ನೇ ಕುಡಿಯುವುದು, ಹಣ್ಣು, ಹಂಪಲು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಶುಧ್ಧ ನೀರಿನಿಂದ ತೊಳೆಯುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು, ಮಲವಿಸರ್ಜನೆಗೆ ಶೌಚಾಲಯವನ್ನೇ ಬಳಸುವುದು ಹಾಗೂ ಆಹಾರ ಪದಾರ್ಥಗಳನ್ನು ಮುಚ್ಚಿಡುವುದರಿಂದ ಜಂತುಹುಳು ಭಾದೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.