ಉಡುಪಿ: ಸರ್ಕಾರವು ಖಾಸಗಿ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳುವ ಯೋಜನೆಗಳಿಂದ ಆರ್ಥಿಕ ಭದ್ರತೆಯನ್ನು ಬಲಿಷ್ಠಗೊಳಿಸುವುದರ ಜತೆಗೆ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಹೇಳಿದರು.
ರಾಜ್ಯ ಸರ್ಕಾರ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ಸಹಭಾಗಿತ್ವದಲ್ಲಿ ಆರಂಭಿಸಿರುವ ಬಯೋ ಇನ್ಕ್ಯುಬೇಟರ್ ಕೇಂದ್ರವನ್ನು ಮಣಿಪಾಲದ ಫಾರ್ಚುನ್ ವ್ಯಾಲಿವ್ಯೂ ಹೋಟೆಲ್ನ ಚೈತನ್ಯ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ರಕ್ಷಣಾ ತಂತ್ರಜ್ಞಾನ ಮೊದಲಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಂಶೋಧನೆ ಕೇಂದ್ರಗಳನ್ನು ರಾಜ್ಯದ ಇತರೆ ಪ್ರದೇಶಗಳಿಗೂ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿ ಭಾಗವನ್ನು ಆಯ್ದುಕೊಳ್ಳಲಾಗಿದೆ.
ಮಣಿಪಾಲದ ಮಾಹೆ ಜೈವಿಕ ಔಷಧಿ ತಂತ್ರಜ್ಞಾನದಲ್ಲಿ ಇನ್ನಷ್ಟು ಸಾಧನೆ ಮಾಡುವ ನಿರೀಕ್ಷೆಯಿದೆ. ಇದು ದೇಶದ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಜನರಲ್ಲಿ ಅವಕಾಶ ವಂಚಿತ ಭಾವನೆ ಬರಬಾರದು. ಬೇರೆ ದೇಶಗಳೊಂದಿಗೆ ಸ್ಪರ್ಧೆ ಮಾಡುವಾಗ ಹಿಂಜರಿಕೆ ಉಂಟಾಗಬಾರದು ಎಂಬ ಇತ್ಯಾದಿ ಕಾರಣಗಳಿಂದ ಸರ್ಕಾರ ಖಾಸಗಿ ಸಹಭಾಗಿತ್ವ ಕಾರ್ಯಕ್ರಮಗಳ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ ಸಾಕಷ್ಟು ಹಣ ವ್ಯಯ ಮಾಡಿದರೂ ಜಾಗತಿಕ ಮಟ್ಟಕ್ಕೆ ನಿರೀಕ್ಷಿತ ಸ್ಪರ್ಧೆ ಒಡ್ಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ರಂಜನ್ ಪೈ, ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಉಪಕುಲಪತಿ ಡಾ. ವಿನೋದ್ ಭಟ್, ಪಶ್ಚಿಮ ವಲಯದ ಪೊಲೀಸ್ ಮಹಾನಿರ್ದೇಶಕ ಅರುಣ್ ಚಕ್ರವರ್ತಿ, ಎಸ್ಪಿ ನಿಶಾ ಜೇಮ್ಸ್, ಐಟಿಬಿಟಿ ಕಾರ್ಯದರ್ಶಿ ಪ್ರಶಾಂತ್ ಮಿಶ್ರ, ಬಯೋ ಇನ್ಕ್ಯುಬೇಟರ್ ಕೇಂದ್ರ ಸಿಇಒ ಡಾ. ಮನೀಷ್ ಥಾಮಸ್ ಉಪಸ್ಥಿತರಿದ್ದರು. ಮಣಿಪಾಲ ಹೆಲ್ತ್ ಸೈನ್ಸ್ ವಿಭಾಗದ ಮುಖ್ಯಸ್ಥ ಸತ್ಯಮೂರ್ತಿ ಸ್ವಾಗತಿಸಿದರು.