ಎಂಡೋಸಲ್ಫಾನ್ ಪೀಡಿತರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಉಡುಪಿ: ಎಂಡೋಸಲ್ಫಾನ್‌ ಪೀಡಿತರ ಹಾಗೂ ಅಂಗವಿಕಲರ ಮಾಸಾಶಾನ ಹೆಚ್ಚಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಂಗವಿಕಲರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಎಂಡೋಸಲ್ಫಾನ್‌ ಪೀಡಿತರಿಗೆ ನೀಡುವ ಮಾಸಾಶಾನವನ್ನು ಕ್ರಮವಾಗಿ 1500 ರೂ. ನಿಂದ 3 ಸಾವಿರ ಹಾಗೂ 3 ಸಾವಿರದಿಂದ 6 ಸಾವಿರಕ್ಕೆ ಹೆಚ್ಚಿಸಬೇಕು. ಅಂಗವಿಕಲರಿಗೆ ಅವಶ್ಯವಿರುವ ಸಾಧನ ಸಲಕರಣೆಗಳನ್ನು ಸರಿಯಾದಸಮಯದಲ್ಲಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ವ ಉದ್ಯೋಗಕ್ಕಾಗಿ ನೀಡುತ್ತಿರುವ ಆಧಾರ್‌ ಗೂಡಂಗಡಿ ಮೊತ್ತವನ್ನು 2 ಲಕ್ಷಕ್ಕೆ ಏರಿಸಬೇಕು. ತೀವ್ರತರದ ಬುದ್ಧಿಮಾಂದ್ಯರು ಮತ್ತು ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳುವ ಸಹಾಯಕರಿಗೆ ಮಾಸಿಕ ಕನಿಷ್ಠ 3 ಸಾವಿರ ವೇತನ ನೀಡಬೇಕು ಎಂದು
ಒತ್ತಾಯಿಸಿದರು.
ಬಾಕಿ ಮಾಶಾಸನ ಬಿಡುಗಡೆಗೆ ಆಗ್ರಹ:
ಅಂಗವಿಕಲರ ಬಾಕಿ ಮಾಶಾಸನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೆಯೇ ಮಾಶಾಸನವನ್ನು‌ ಪ್ರತಿ ತಿಂಗಳ 15ನೇ ದಿನಾಂಕದೊಳಗೆ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ಅಂಗವಿಕಲರ ಮಾಸಿಕ ಪೋಷಣ ಭತ್ತೆಯನ್ನು 600ರಿಂದ 3 ಸಾವಿರಕ್ಕೆ ಹಾಗೂ 1400ರಿಂದ 5 ಸಾವಿರಕ್ಕೆ ಹೆಚ್ಚಿಸಬೇಕು. ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರಿಗೆ ಗ್ರಾಪಂಗಳ ಶೇ. 5ರ
ನಿಧಿಯಡಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ್‌ ಕೋಣಿ ಆಗ್ರಹಿಸಿದರು.
ಪ್ರತಿಭಟನೆಯ ಬಳಿಕ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ‌ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಾರ್‌, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ, ಜಂಟಿ ಕಾರ್ಯದರ್ಶಿ ನಾರಾಯಣ ಶೇರುಗಾರ, ಕೃಷ್ಣ ನಾಯ್ಕ್‌‌ ಬ್ರಹ್ಮಾವರ, ಕೋಶಾಧಿಕಾರಿ ಬಾಬು ದೇವಾಡಿಗ, ಜಿಲ್ಲಾ ಮಟ್ಟದ ಸಮಗ್ರ ಅಂಗವಿಕಲರ ವಿಆರ್‌ಡಬ್ಲ್ಯೂ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷೆ ಮಂಜುಳಾ ಸುಭಾಷ್‌, ಕಾರ್ಯದರ್ಶಿ ಹರೀಶ್‌ ಶೆಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪುನರ್ವಸತಿ ಕೇಂದ್ರ ಶೀಘ್ರ ಆರಂಭಿಸಿ
ಬೈಂದೂರಿನ ನಾಡಾ ಗ್ರಾಪಂ ವ್ಯಾಪ್ತಿಯ ಸೇನಾಪುರದಲ್ಲಿ ಜಿಲ್ಲೆಯ ಎಂಡೋಸಲ್ಫಾನ್‌ ಪೀಡಿತರ ಪುನರ್ವಸತಿ ಕೇಂದ್ರ ಹಾಗೂ ವೈದ್ಯಕೀಯ ಆರೈಕೆಯ ಸೌಲಭ್ಯಕ್ಕಾಗಿ ಆಸ್ಪತ್ರೆ ನಿರ್ಮಿಸಲು ಸರ್ಕಾರದ ವತಿಯಿಂದ ಐದು ಎಕರೆ ಜಾಗ ಮೀಸಲಿಡಲಾಗಿದೆ. ಆದರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಈವರೆಗೂ ಸರ್ಕಾರದಿಂದ ಅನುದಾನ ಮಂಜೂರಾಗಿಲ್ಲ. ಆದ್ದರಿಂದ‌ ಶೀಘ್ರವೇ ಕೇಂದ್ರವನ್ನು ಆರಂಭಿಸಬೇಕು ಎಂದು ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ ಕೋಣಿ ಒತ್ತಾಯಿಸಿದರು.