ಉಡುಪಿ: ಡಿಸಿಎಂ ಹುದ್ದೆ ಹೆಚ್ಚಳದ ಬಗ್ಗೆ ಸರ್ಕಾರ ಹಾಗೂ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಹೊರಗಡೆ ಚರ್ಚೆ ಆಗುತ್ತಿದೆ ಅಷ್ಟೇ. ಅಲ್ಲದೆ, ಈ ಸಂಬಂಧ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಅವರು ಉಡುಪಿ ಕೃಷ್ಣಮಠಕ್ಕೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಯಡಿಯೂರಪ್ಪನವರು ವಿದೇಶ ಪ್ರವಾಸದಿಂದ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದರು.
ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಬಿಜೆಪಿ ಶಾಸಕರಿಗೆ ಅಥವಾ ಏಳು ಮಂದಿಗೆ ಮಾತ್ರವೇ ಸಚಿವ ಸ್ಥಾನ ನೀಡುವ ಕುರಿತು ಯಾವುದೇ ನಿರ್ಣಯ ಆಗಿಲ್ಲ. ಸಿಎಂ ಹೈಕಮಾಂಡ್ ಜತೆಗೆ ಚರ್ಚೆ ಮಾಡಿ ಯೋಗ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಆ ಶಾಸಕರೇ ಕಾರಣ ಎನ್ನುವುದು ಎಲ್ಲರ ಗಮನದಲ್ಲಿಯೂ ಇದೆ. ಅದಕ್ಕೆ ಪೂರಕವಾಗಿ ನಿರ್ಣಯ ಮಾಡಲಾಗುತ್ತದೆ. ಈ ಬಗ್ಗೆ ಯಾವುದೇ ಗೊಂದಲಬೇಡ ಎಂದು ಹೇಳಿದರು.