ಮಕ್ಕಳಿಗೆ ‘ರೋಟಾ ವೈರಸ್’ ಲಸಿಕೆ ನೀಡಿ: ಜಿಲ್ಲಾಧಿಕಾರಿ

ಉಡುಪಿ, ಅಗಸ್ಟ್ 7: ಮಕ್ಕಳಲ್ಲಿ ಅತಿಸಾರ ಭೇದಿ ಉಂಟು ಮಾಡುವ ರೋಟಾ ವೈರಸ್ ನಿಯಂತ್ರಣಕ್ಕಾಗಿ, ಮಕ್ಕಳಿಗೆ 6 ನೇ, 10 ನೇ ಮತ್ತು 14 ವಾರದಲ್ಲಿ ತಪ್ಪದೇ ರೋಟಾ ವೈರಸ್ ಲಸಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ರೋಟಾ ವೈರಸ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ, ರೋಟಾ ವೈರಸ್‍ನಿಂದ ಮಕ್ಕಳಲ್ಲಿ ಕಂಡು ಬರುವ ಅತಿಸಾರ ಬೇಧಿ ನಿಯಂತ್ರಿಸಲು ರೋಟಾ ವೈರಸ್ ಲಸಿಕೆಯನ್ನು ನೀಡಬೇಕಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಈ ಲಸಿಕೆ ಸೇರ್ಪಡೆಯಾಗಿದ್ದು, ಈ ವೈರಸ್‍ನಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಹಾಗೂ ಲಸಿಕೆ ನೀಡುವುದರ ಕುರಿತು ಆರೋಗ್ಯ ಇಲಾಖೆಯು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸಂಬಂದಪಟ್ಟ ಎಲ್ಲಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವಂತೆ ಡಿಹೆಚ್‍ಓ ಅವರಿಗೆ ಸೂಚಿಸಿದ ಡಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ, ಗರ್ಭಿಣಿ ಮಹಿಳೆಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

 

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ಚಂದ್ರ, ರೋಟಾ ಲಸಿಕೆ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಶೋಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಎಂ.ಜಿ.ರಾಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು. (ಸಂಪರ್ಕಕಾಗಿ ಡಾ. ಎಂ.ಜಿ.ರಾಮ ಮೊ.9449843213)