ಡೆಂಗ್ಯೂ ನಿಯಂತ್ರಣಕ್ಕೆ ವಿಶೇಷ ಅಭಿಯಾನ ನಡೆಸಿ: ಕೂರ್ಮಾರಾವ್

ಉಡುಪಿ: ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ಗ್ರಾಮಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಮೂರು ದಿನಗಳ ವಿಶೇಷ ಡೆಂಗ್ಯೂ ನಿಯಂತ್ರಣ ಅಭಿಯಾನ ನಡೆಸಿ, ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ಗ್ರಾಮಗಳ ಡೆಂಗ್ಯೂ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನಿಯಂತ್ರಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ಅವರು, ಮುದೂರು ಹಾಗೂ ಜಡ್ಕಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು, ಪ್ರತಿ ಮನೆಗೆ ಭೇಟಿ ನೀಡಿ ಶಂಕಿತರಿದ್ದಲ್ಲಿ ಡೆಂಗ್ಯೂ ಪರೀಕ್ಷೆ ನಡೆಸಿ, ರೋಗ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಚಿಕಿತ್ಸೆ ನೀಡಲು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ಡೆಂಗ್ಯೂ ವಾರ್ಡನ್ನು ತೆರೆಯಬೇಕು ಎಂದು ಆರೋಗ್ಯ ಇಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳೆಯ ನೀರು ಅಥವಾ ಕಲುಷಿತ ವಾತಾವರಣವಿಲ್ಲದಂತೆ ಎಚ್ಚರ ವಹಿಸಬೇಕು ಎಂದ ಅವರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಆಗಿಂದಾಗ್ಗೆ ಭೇಟಿ ನೀಡಿ, ಮನೆಯ ಸುತ್ತಮುತ್ತ ನೀರು ನಿಂತಿರುವ ಬಗ್ಗೆ ಪರೀಕ್ಷಿಸಿ ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸದಂತೆ ಕ್ರಮ ವಹಿಸಬೇಕು ಎಂದರು.

ಏಪ್ರಿಲ್ 28 ರಿಂದ 30 ರ ವರೆಗೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಡೆಂಗ್ಯೂ ನಿಯಂತ್ರಣ ಕುರಿತು ವಿಶೇಷ ಅಭಿಯಾನವನ್ನು ಕೈಗೊಳ್ಳಬೇಕು. ಸ್ಥಳೀಯ ಜನರಿಗೆ ಅವರು ಬಳಸುವ ಭಾಷೆಯಲ್ಲಿಯೇ ಆರೋಗ್ಯ ಶಿಕ್ಷಣ ನೀಡಬೇಕು. ನಾಟಕ, ಯಕ್ಷಗಾನ ಅಥವಾ ಸ್ಥಳೀಯ ಕಲೆಗಳನ್ನು ಬಳಸಿಕೊಂಡು ಡೆಂಗ್ಯೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಚಾರಪಡಿಸಬೇಕು ಎಂದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಶಾಂತ್ ಭಟ್, ಕುಂದಾಪುರ ತಾಲೂಕು ವೈದ್ಯಾಧಿಕಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿಗಳು ಉಪಸ್ಥಿತರಿದ್ದರು.