ಉಡುಪಿ ಏಪ್ರಿಲ್ 8: ಪ್ರಸಕ್ತ ಕೊರೊನಾ ವೈರಾಣು ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯೆಲ್ಲಿ ಮಾರ್ಚ್ 24 ರಿಂದ ದೇಶವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಕೇಂದ್ರ ಸರ್ಕಾರದಿಂದ ಆದೇಶಿಸಲಾಗಿದ್ದು, ಆದೇಶದಲ್ಲಿ ಕೆಲವೊಂದು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.
ರಾಜ್ಯದ ಹಾಪ್ ಕಾಮ್ಸ್ ಸಂಸ್ಥೆಯು ತೋಟಗಾರಿಕೆ ಇಲಾಖೆಯ ಒಂದು ಅಂಗ ಸಂಸ್ಥೆಯಾಗಿದ್ದು, ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ರೈತರಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅನುವಾಗುವಂತೆ , ಉಡುಪಿ ಜಿಲ್ಲೆಯಲ್ಲಿನ, ಉಡುಪಿ ನಗರ, ಉಪ್ಪುಂದ ಹಾಗೂ ಕಾರ್ಕಳ ಆಸ್ಪತ್ರೆ ಆವರಣದಲ್ಲಿರುವ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಜಿಲ್ಲಾಧಿಕರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ.
ಈ ಮಳಿಗೆಗಳನ್ನು , ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಕನಿಷ್ಟ ಸಿಬ್ಬಂದಿಯೊಂದಿಗೆ ತೆರೆಯುವುದು ಹಾಗೂ ಮಳಿಗೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯವರಿಗೆ ಕೋವಿಡ್-19 ಸೊಂಕು ತಗಲಿರುವುದಿಲ್ಲ ಹಾಗೂ ಸದರಿ ರೋಗ ಲಕ್ಷಣಗಳಿರುವುದಿಲ್ಲ ಎಂಬ ಬಗ್ಗೆ ದೃಢೀಕರಿಸಿಕೊಂಡು ಅವರಿಂದ ಸೇವೆ ಪಡೆಯುವುದು.
ಕೋವಿಡ್-19 ಸೊಂಕು ಹರಡದಂತೆ ಅಗತ್ಯ ಮುಂಜಾಗೃತಾ ಕ್ರಮಗಳಾದ ಮಾಸ್ಕ್, ಗ್ಲಾವ್ಸ್ ಹಾಗೂ ಸ್ಯಾನಿಟೈಸರ್ ಗಳನ್ನು ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಳಿಗೆಗಳಲ್ಲಿ ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳು ಉತ್ತಮ ಗುಣಮಟ್ಟ ಹೊಂದಿರತಕ್ಕದ್ದು, ಹಾಗೂ ನೈಜ ದರಗಳಲ್ಲಿ ಮಾರಾಟ ಮಾಡಬೇಕು, ಮಳಿಗೆಗಳಲ್ಲಿ ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳ ದರಪಟ್ಟಿಯನ್ನು ಮಳಿಗೆಯಲ್ಲಿ ಪ್ರದರ್ಶಿಸಬೇಕು, ಪ್ರತಿ ದಿನ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳ ವಿವರ ಹಾಗೂ ರೈತರ ವಿವರ, ರೈತರಿಗೆ ನೀಡಿದ ದರ ಹಾಗೂ ಮಾರಾಟ ಮಾಡಿದ ದರದ ವಿವರವನ್ನು ತೋಟಗಾರಿಕಾ ಉಪ ನಿರ್ದಶಕರು (ಜಿ.ಪಂ.), ಉಡುಪಿರವರಿಗೆ ಒದಗಿಸುವುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.