ಕುಂದಾಪುರ: ಎಲ್ಲಾ ಕಡೆಯೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನರಿರುವ ಕಡೆ ಮಾಸ್ಕ್ ಅಗತ್ಯ ಇದೆ. ನಮ್ಮಲ್ಲಿ ಮಾಸ್ಕ್ ಅಭಾವವಿದೆ. ಮಾಸ್ಕ್ ಧರಿಸದವರಿಗೆ ಹೊಡೆಯಬೇಡಿ ಎಂದು ಈಗಾಗಲೇ ಎಸ್ಪಿಯವರಿಗೆ ಸೂಚನೆ ಕೊಟ್ಟಿದ್ದೇನೆ. ಸಾರ್ವಜನಿಕರು ಈ ಬಗ್ಗೆ ತಲೆ ಕೆಡಿಸಿಕೂಳ್ಳುವುದು ಬೇಡ. ಸ್ಯಾನಿಟೈಸರ್ ಪೂರೈಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಲಾಕ್‍ಡೌನ್ ಹಿನ್ನೆಲೆ ಶುಕ್ರವಾರ ಕುಂದಾಪುರಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕುಂದಾಪುರದಲ್ಲಿ ಕೊರೋನಾ ಜಾಗೃತಿಗಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಸಹಾಯಕ ಕಮಿಷನರ್ ಮತ್ತು ಎಎಸ್ಪಿ ತೆಗೆದುಕೊಂಡಿದ್ದಾರೆ. ಯಾರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೋ ಅಂತವರ ವಿರುದ್ದ ಕಠಿಣ ಕ್ರಮ ಜರುಗಿಸಿ ಎಂದು ಈಗಾಗಲೇ ನಮಗೆ ಸರ್ಕಾರದಿಂದ ನಿದೇರ್ಶನ ಬಂದಿದೆ. ಕಾನೂನು ಉಲ್ಲಂಘನೆ ಮಾಡಿದರೆ ಬರಿ ಲಾಠಿಚಾರ್ಜ್ ಅಷ್ಟೇ ಅಲ್ಲ, ಪ್ರಕರಣ ದಾಖಲಿಸಲು ಸೂಚನೆ ಕೂಟ್ಟಿದ್ದಾರೆ. ಆದ್ದರಿಂದ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಬರಬಾರದು. ತುರ್ತು ಅಗತ್ಯವಿದ್ದರೆ ಮಾತ್ರ ಬರಬೇಕು ಎಂದರು.
ಮನೆಯಲ್ಲೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ವಸ್ತುಗಳನ್ನು ಖರೀದಸಿಲು ಹೋಗುವಾಗಲೂ ಅಂತರ ಇರಲಿ. ಯಾರು ಅಂಗಡಿಗಳಲ್ಲಿ ಸಾಮಾಜಿಕ ಅಂತರದ ಗೆರೆಗಳನ್ನು ಹಾಕಿಲ್ಲವೋ ಅಂತಹ ಅಂಗಡಿಗಳನ್ನು ಮುಚ್ಚಲು ಸೂಚನೆ ಕೊಟ್ಟಿದ್ದೇನೆ.
ಕುಂದಾಪುರದಲ್ಲಿ ಹೋಮ್ ಕ್ವಾರಂಟೈನ್ ಆಸ್ಪತ್ರೆ.:
ವಿದೇಶದಿಂದ ಹಾಗೂ ಬೇರೆ ಬೇರೆ ಕಡೆಯಿಂದ ಬರುವವರಿಗೆ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 10 ಬೆಡ್‍ಗಳ ಐಸೋಲೇಶನ್ ವಾರ್ಡ್ ತೆರೆದಿದ್ದು, ಹೆಚ್ಚುವರಿಯಾಗಿ ರಾಷ್ಟ್ರೀಯ ಹೆದ್ದಾರಿ ಬಳಿಯ ಸಂತೆ ಮಾರುಕಟ್ಟೆ ಸಮೀಪದ ಹಳೆ ಆದರ್ಶ ಆಸ್ಪತ್ರೆಯನ್ನು ಹೋಮ್ ಕ್ವಾರಂಟೈನ್ ಆಸ್ಪತ್ರೆಯಾಗಿ ಬದಲಾವಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಆದರ್ಶ ಆಸ್ಪತ್ರೆ ಇಲ್ಲಿನ ಸಂಗಮ್ ಸಮೀಪಕ್ಕೆ ಸ್ಥಳಾಂತರಗೊಂಡಿತ್ತು. ಹಳೆ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡಿದ್ದರಿಂದ ಇದೀಗ ಆ ಕಟ್ಟಡವನ್ನು ಉಚಿತವಾಗಿ ಹೋಮ್ ಕ್ವಾರಂಟೈನ್ ಆಸ್ಪತ್ರೆಯಾಗಿ ಪರಿವರ್ತಿಸಲು ಡಾ. ಆದರ್ಶ ಹೆಬ್ಬಾರ್ ಕುಟುಂಬ ಮುಂದೆ ಬಂದಿದೆ. ಇದಿಗ ಡಿಸಿ ಜಗದೀಶ್ ಸೂಚನೆ ಮೇರೆಗೆ ಕುಂದಾಪುರ ಎಸಿ ಕೆ. ರಾಜು ಪುರಸಭೆಗೆ ಆದರ್ಶ ಕಟ್ಟಡ ಸ್ವಚ್ಛಗೊಳಿಸಿ ಮೂಲಭೂತ ಸೌಲಭ್ಯ ಹಾಗೂ ಚಿಕ್ಕಪುಟ್ಟ ದುರಸ್ತಿಗೆ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ಸೂಚಿಸಿದ್ದಾರೆ. ಪುರಸಭೆಯು ಕಟ್ಟಡ ಸ್ಚಚ್ಛ ಮಾಡುತ್ತಿದ್ದು, ಸಂಜೆಯೊಳಗೆ ಕಟ್ಟಡ ಬಿಟ್ಟುಕೊಡಲಿದೆ. ಹಾಗೆ ಆಸ್ಪತ್ರೆಗೆ ತುರ್ತು ಪ್ರವೇಶಕ್ಕೆ ಐಆರ್‍ಬಿ ಬ್ಯಾರಿಕೇಡ್ ತೆರವು ಮಾಡುವ ಕೆಲಸ ನೆಡಸುತ್ತಿದೆ. ಹಳೇ ಆದರ್ಶ ಆಸ್ಪತ್ರೆಯಲ್ಲಿರುವ ಎಲ್ಲಾ ಕೊಠಡಿ ಹೋಮ್ ಕ್ವಾರಂಟೈನ್ ಆಗಿ ಬದಲಾಗಲಿದೆ.