ಉಡುಪಿ: ಹೋಂ ಕ್ವಾರಂಟೈನ್ ನಲ್ಲಿರುವವರನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್  

ಉಡುಪಿ : ಕಾರ್ಕಳ ತಾಲೂಕಿನಲ್ಲಿ  ಹೋಂ ಕ್ವಾರಂಟೈನ್ ನಲ್ಲಿರುವವರನ್ನು ದಿನದಲ್ಲಿ 2 ಬಾರಿ ಕಡ್ಡಾಯವಾಗಿ ಅವರ ಮನೆಗೆ ತೆರಳಿ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುವಂತೆ ಕಾರ್ಕಳ ತಾಲೂಕಿನ ಕಂದಾಯ ನಿರೀಕ್ಷಕರುಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಮಂಗಳವಾರ ಕಾರ್ಕಳ ತಾಲೂಕು ಕಚೇರಿಗೆ ಭೇಟಿ ನೀಡಿ, ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಹೋಂ  ಕ್ವಾರಂಟೈನ್ ನಲ್ಲಿರುವವರು ನಿಗಧಿತ ಅವಧಿಯ ತನಕ ಮನೆ ಬಿಟ್ಟು ಹೊರ ಬರದ ರೀತಿಯಲ್ಲಿ ಎಲ್ಲಾ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರತಿದಿನ 2 ಬಾರಿ ಅವರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿ, ವರದಿ ನೀಡಬೇಕು, ಅವರು ಅಗತ್ಯ ಸುರಕ್ಷಾ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ಮತ್ತು ಸರಕಾರ ವಿಧಿಸಿರುವ ನಿರ್ಬಂದಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಯಾವುದಾದರೂ ಉಲ್ಲಂಘನೆ ಪ್ರಕರಣ ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಿದರು.