ಉಡುಪಿ: ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಏಳು ತಾಲೂಕು ಕಚೇರಿಗಳ ಮುಂದೆ ಶುಕ್ರವಾರ ಏಕಕಾಲದಲ್ಲಿ ಧರಣಿ ನಡೆಸಲಾಯಿತು.
ಉಡುಪಿ ತಾಲೂಕು ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ನೂರಾರು ಧರಣಿನಿರತರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಧರಣಿ ಉದ್ದೇಶಿಸಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಅವರು, ಲಕ್ಷಾಂತರ ಎಕರೆ ಸರಕಾರಿ ಭೂಮಿ ಇದ್ದರೂ ದಲಿತರಿಗೆ ಭೂಮಿ ನೀಡದೆ ಸರಕಾರ ವಂಚಿಸುತ್ತಿದೆ. ಅಕ್ರಮ ಸಕ್ರಮದಡಿ ದಲಿತರು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಆ ಅರ್ಜಿಗಳನ್ನು ತಿರಸ್ಕೃರಿಸಿ ಭೂಮಿ ಸಿಗದಂತೆ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲೂ ಕೂಡ ಸಾವಿರಾರು ದಲಿತರ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಅಕ್ರಮ ಸಕ್ರಮ ದಡಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು, ರಾಜಕೀಯ ಪುಡಾರಿಗಳ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ ಎಂದು ದೂರಿದರು.
ಇಂದು ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳ ಮುಂದೆ ಧರಣಿ ಮಾಡಿದ್ದೇವೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸಮಸ್ಯೆ ಬಗೆಹರಿಸಲು ಕೆಲವು ದಿನಗಳ ಗಡುವು ನೀಡುತ್ತೇವೆ. ಆದಾದ ಬಳಿಕವೂ ಸಮಸ್ಯೆ ಬಗೆಹರಿಯದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತೇವೆ. ಜಿಲ್ಲೆಗೆ ಉಸ್ತುವಾರಿ ಸಚಿವರು ಬಂದಾಗ ಘೇರಾವ್ ಹಾಕುತ್ತೇವೆ. ಕಪ್ಪು ಬಾವುಟ ಪ್ರದರ್ಶನ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರಕಾರದ ಸುಳ್ಳು ಭರವಸೆ ಕೇಳಿ ಕೇಳಿ ನಾವು ತಾಳ್ಮೆ ಕಳೆದುಕೊಂಡಿದ್ದೇವೆ. ಇನ್ನೂ ನಮ್ಮಿಂದ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.












