ಅ.21ರಂದು ಎಂಜಿಎಂ ಮೈದಾನದಲ್ಲಿ ಬಹು ನಿರೀಕ್ಷಿತ “ಉಡುಪಿ ದಾಂಡಿಯ 2023” ಆಯೋಜನೆ

ಉಡುಪಿ: ಉಡುಪಿ ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಮಹಿಳಾ ತಂಡದ ನೇತೃತ್ವದಲ್ಲಿ ಸತತ 6ನೇ ವರ್ಷದ “ಉಡುಪಿ ದಾಂಡಿಯ 2023” ಕಾರ್ಯಕ್ರಮವನ್ನು ಅ.21ರಂದು ಸಂಜೆ 6 ಗಂಟೆಯಿಂದ ಎಂಜಿಎಂ ಮೈದಾನದಲ್ಲಿ ನಡೆಸಲಾಗುವುದು ಎಂದು ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ತಿಳಿಸಿದರು.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತಿನ ಸಾಂಪ್ರದಾಯಿಕ ಗರ್ಭ ಯಾನೆ ದಾಂಡಿಯಾ ನೃತ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕಡಿಯಾಳಿ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ಬಾರಿ 6ನೇ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುವುದು. ಕಳೆದ ವರ್ಷ ಸುಮಾರು 3000 ಮಹಿಳೆಯರು ದಾಂಡಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಾರಿ ಸುಮಾರು 6000 ಮಹಿಳೆಯರು ನೃತ್ಯದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಕೃಷಿ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಭರಣ ಜ್ಯುವೆಲರ್ಸ್‌ ನ ಸಂಧ್ಯಾ ಎಸ್ ಕಾಮತ್‌, ಜಯಲಕ್ಷ್ಮಿ ಸಿಲ್ಕ್ ನ ಜಯಲಕ್ಷ್ಮಿ ವಿ ಹೆಗ್ಡೆ ಅಪರ್ಣ ಆರ್ ಹೆಗ್ಡೆ, ಪವರ್ ಸಂಸ್ಥೆಯ ಅಧ್ಯಕ್ಷೆ ಸುವರ್ಷ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ದಾಂಡಿಯಾ ಕಾರ್ಯಕ್ರಮದ ವಿಶೇಷತೆಗಳು

ಕಾರ್ಯಕ್ರಮ ನಡೆಯುವ ಎಂ.ಜಿ.ಎಂ ಮೈದಾನದಲ್ಲಿ ವಿಶೇಷ ಆಹಾರ ಮೇಳವನ್ನು ತೆರೆಯಲಾಗುವುದು, ಈ ದಾಂಡಿಯ ನೃತ್ಯದಲ್ಲಿ 10 ವರ್ಷದ ಕೆಳಗಿನ ಮಕ್ಕಳಿಗೆ ಉತ್ತಮ ಡಾನ್ಸ್, ಮತ್ತು ಉತ್ತಮ ಉಡುಗೆ ಹಾಗೂ ಪ್ರತ್ಯೇಕವಾಗಿ ಬಾಲಕರಿಗೆ ಮತ್ತು ಬಾಲಕಿಯರಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನವನ್ನು ನೀಡಲಾಗುವುದು. ಅತ್ಯುತ್ತಮ ನೃತ್ಯ, ವೇಷಭೂಷಣ, ಉತ್ತಮ ಜೋಡಿ ನೃತ್ಯ ಮತ್ತು ಗುಂಪು ನೃತ್ಯ, ಜೊತೆಗೆ ಆಕರ್ಷಕ ಸಾಂಪ್ರದಾಯಿಕ ಉಡುಗೆಯ ಪುರುಷ ಮತ್ತು ಮಹಿಳೆ ವಿಭಾಗದಲ್ಲಿ ಸ್ಪರ್ಧೆ ಇರುವುದು. ಬಹುಮಾನ ವಿಜೇತರಿಗೆ ಜಯಲಕ್ಷ್ಮಿ ಸಿಲ್ಕ್ ಪ್ರಾಯೋಜಿತ ತಲಾ ರೂ.5000 ಮೌಲ್ಯದ ಗಿಫ್ಟ್ ವೋಚರನ್ನು ನೀಡಲಾಗುವುದು.

ರಿದಂ ಮ್ಯೂಸಿಕ್ ಗ್ರೂಪಿನ ಸತೀಶ್ ಬನ್ನಂಜೆ ನೇತೃತ್ವದಲ್ಲಿ ಲೈವ್ ದಾಂಡಿಯ ಮ್ಯೂಸಿಕ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತುಳು ಚಲನಚಿತ್ರ ರಂಗದ ಖ್ಯಾತ ನಟರು ಭಾಗವಹಿಸಲಿದ್ದಾರೆ ಮತ್ತು ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದ್ದು ಮೈದಾನದಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ, ದಾಂಡಿಯ ಸಮಿತಿಯ ಸದಸ್ಯರಾದ ಆಶಾ ವಿ ಭಟ್, ಸುಜಲ ಸುವರ್ಣ, ದೀಪಾ ಕರ್ತಿ ಉಪಸ್ಥಿತರಿದ್ದರು.