ದಕ್ಷಿಣ ವಲಯ ಪುರುಷರ ಕಬಡ್ಡಿ; ಮಂಗಳೂರು‌‌‌ ವಿವಿಗೆ ಪ್ರಶಸ್ತಿ

ಉಡುಪಿ: ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ಅನ್ನು ಮಂಗಳೂರು ವಿಶ್ವವಿದ್ಯಾನಿಲಯ ತಂಡ ಗೆದ್ದುಕೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ತೆಂಕನಿಡಿಯೂರು ಕಾಲೇಜಿನ ಸಹಯೋಗದಲ್ಲಿ ಟೂರ್ನಿ ಆಯೋಜಿಸಲಾಗಿತ್ತು.
ಚೆನ್ನೈನ ವೇಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಅಂಡ್‌ ಅಡ್ವಾನ್ಸ್‌ ಸ್ಟಡೀಸ್‌ ತಂಡ ದ್ವಿತೀಯ, ತಿರುನೇಲ್ವೇಲಿ ಎಂ.ಎಸ್‌. ವಿವಿ ತಂಡ ತೃತೀಯ ಹಾಗೂ ಚೆನ್ನೈ ಎಸ್‌ಆರ್‌ಎಂ ವಿವಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿವೆ.
ಟೂರ್ನಿಯಲ್ಲಿ ದಕ್ಷಿಣ ಭಾರತದ ವಲಯದ ಏಳು ರಾಜ್ಯಗಳ ಒಟ್ಟು 91 ವಿಶ್ವವಿದ್ಯಾನಿಲಯ ತಂಡಗಳು ಭಾಗವಹಿಸಿದ್ದವು. ಶನಿವಾರ ಕಾಲೇಜಿನ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರು ವಿವಿಯ ಕುಲಸಚಿವ ಡಾ. ಎ.ಎಂ. ಖಾನ್‌, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ.ಕೆ.  ಕಿಶೋರ್‌ಕುಮಾರ್‌, ಉಪನಿರ್ದೇಶಕ ಡಾ. ಜೆರಾಲ್ಡ್‌ ಸಂತೋಷ್‌ ಡಿಸೋಜ,‌ ತಮಿಳುನಾಡು ಫಿಸಿಕಲ್‌ ಎಜುಕೇಶನ್‌ ವಿವಿಯ ಮಾಜಿ ಕುಲಪತಿ ವೈದ್ಯನಾಥನ್‌,‌ ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಎಸ್‌. ಹೆಗ್ಡೆ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ರಾಜೇಂದ್ರ ಸುವರ್ಣ, ಉಡುಪಿ ಜಿಲ್ಲಾ ಲಾನ್‌ ಟೆನ್ನಿಸ್‌ ಅಸೋಸಿಯೇಶನ್‌ ಅಧ್ಯಕ್ಷ
ಸಿ.ಎ. ದೇವ್‌ ಆನಂದ, ಉದ್ಯಮಿ ಪ್ರಖ್ಯಾತ್‌ ಶೆಟ್ಟಿ, ಕ್ರೀಡಾಕೂಟದ ಸಂಚಾಲಕ ಡಾ. ರಾಮಚಂದ್ರ ಪಾಟ್ಕರ್‌ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಟೂರ್ನಿಯ ಸವಿನೆನಪಿಗಾಗಿ ಪ್ರೊ. ಪ್ರಸಾದ್‌ ರಾವ್‌ ಸಂಪಾದಿಸಿದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.