ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸ್ಥಳೀಯ ಕುಚ್ಚಲಕ್ಕಿ ಪಡಿತರವಾಗಿ ನೀಡಿ: ಸಚಿವರಾದ ಕೋಟ, ಅಂಗಾರರಿಂದ ಸಿಎಂಗೆ ಮನವಿ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರದ ಮೂಲಕ ವಿತರಿಸುತ್ತಿರುವ ಕುಚ್ಚಲಕ್ಕಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಜನಸಾಮಾನ್ಯರು ಅದರಲ್ಲೂ ಬಡವರು ಅಕ್ಕಿಯನ್ನು ಉಪಯೋಗಿಸದೆ ಕಡಿಮೆ ದರಕ್ಕೆ ಮಾರಾಟ ಮಾಡಿ ಹೆಚ್ಚು ದರದ ಕೆಂಪು ಕುಚಲಕ್ಕಿಯನ್ನು ಖರೀದಿಸುತ್ತಿದ್ದಾರೆ. ಕೆಲವು ಕಡೆ ಪಡಿತರ ಅಕ್ಕಿಯನ್ನೇ ಪಡೆಯುತ್ತಿಲ್ಲ. ಹಾಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಡಿತರದಾರರಿಗೆ ಬೇಕಾಗುವ ಕುಚ್ಚಲಕ್ಕಿಯನ್ನು ಸ್ಥಳೀಯ ರೈತರಿಂದ ಸಂಗ್ರಹಿಸಿ ವಿತರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರ ನೇತೃತ್ವದಲ್ಲಿ ಕರಾವಳಿಯ ಶಾಸಕರು ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 58 ಸಾವಿರ ಕ್ವಿಂಟಲ್ ಪಡಿತರ ಅಕ್ಕಿಯ ಅಗತ್ಯವಿದ್ದು, ಉಡುಪಿ ಜಿಲ್ಲೆಗೆ 40 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ಬೇಕಾಗಿದೆ. ಒಟ್ಟು ಸರಾಸರಿ ತಿಂಗಳಿಗೆ ಒಂದು ಲಕ್ಷ ಕ್ವಿಂಟಲ್ ಅಗತ್ಯವಿದ್ದು, ಇದಕ್ಕೆ ಬೇಕಾಗುವಷ್ಟು ಭತ್ತದ ಬೆಳೆ ಅವಳಿ ಜಿಲ್ಲೆಯಲ್ಲಿ ಲಭ್ಯವಿಲ್ಲದೆ ಇರುವುದರಿಂದ ಮೈಸೂರು, ಮಂಡ್ಯ ಮೊದಲಾದ ಕಡೆಯಿಂದ ಜಯ ಮತ್ತು ಇನ್ನಿತರ ಭತ್ತದ ತಳಿಯ ಫಸಲನ್ನು ಸಂಗ್ರಹಿಸಿ ಕುಚ್ಚಲಕ್ಕಿಯನ್ನು ತಯಾರಿಸುವ ಬಗ್ಗೆ ಸಿಎಂಗೆ ಮನವಿ ನೀಡಲಾಯಿತು.

ಮನವಿ ಸ್ವೀಕರಿಸಿದ ಸಿಎಂ ತಕ್ಷಣವೇ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ನಂತರ ವಿಧಾನಸೌಧದಲ್ಲಿ ಸಚಿವ ಕೋಟ ಅವರ ಕಚೇರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಶಾಸಕರಾದ ಉಮಾನಾಥ್ ಕೋಟ್ಯಾನ್, ಸಂಜೀವ ಮಠಂದೂರು ಮುಂತಾದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಸಮಕ್ಷಮ ನಡೆದ ಸಭೆಯಲ್ಲಿ ಮುಂದಿನ ಒಂದು ವಾರಗಳಲ್ಲಿ ಕರಾವಳಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರು ಮತ್ತು ಆಹಾರ ನಿಗಮದ ಅಧಿಕಾರಿಗಳು ಮತ್ತು ಅವಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮಕ್ಷಮ ಸಭೆ ನಡೆಸಿ ಕುಚಲಕ್ಕಿಯ ತಯಾರಿಕೆಗಾಗಿ ಭತ್ತದ ಖರೀದಿ, ಸಂಸ್ಕರಣೆ, ವಿತರಣೆ ಕುರಿತು ಸೂಕ್ತ ಮಾರ್ಗೋಪಾಯ ಕಂಡುಹಿಡಿಯಲು ಅಗತ್ಯ ಕ್ರಮಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸಚಿವ ಉಮೇಶ್ ಕತ್ತಿ ಸೂಚಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉಪ ನಿರ್ದೇಶಕರು ಉಪಸ್ಥಿತರಿದ್ದರು.