ದಕ್ಷಿಣ ಕನ್ನಡ ಜಿಲ್ಲೆಯಿಂದ ಅರುಣ್ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಜನರ ಗಡೀಪಾರಿಗೆ ಪ್ರಕ್ರಿಯೆ ಆರಂಭ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಸಾಲು ಸಾಲು ಕೊಲೆಗಳು ಸರ್ಕಾರವನ್ನು ಬಡಿದೆಬ್ಬಿಸಿದ್ದು, ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಜಿಲ್ಲೆಯ ಪೊಲೀಸ್ ವ್ಯವಸ್ಥೆಗೆ ಮೇಜರ್ ಸರ್ಜರಿ ಆಗಿದೆ. ಹೊಸದಾಗಿ ಅಧಿಕಾರ ಸ್ವೀಕರಿಸಿರುವವರು ಆಪರೇಷನ್ ಆರಂಭಿಸಿದ್ದಾರೆ. ಸರಣಿ ಕೊಲೆಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋಮು ಪ್ರಚೋದನೆ ನೀಡುತ್ತಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 15 ಮುಸ್ಲಿಮರೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 36 ಜನರ ಗಡೀಪಾರಿಗೆ ಪ್ರಕ್ರಿಯೆ ಆರಂಭವಾಗಿದೆ. ಗಡೀಪಾರು ಪಟ್ಟಿಯಲ್ಲಿ ಬಿಜೆಪಿ ಮುಖಂಡ ಅರುಣ್ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಹೆಸರಿದೆ. ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ವಿಟ್ಲ, ಸುಳ್ಯ, ಬೆಳ್ಳಾರೆ ಬೆಳ್ತಂಗಡಿ, ಪುಂಜಾಲಕಟ್ಟೆ, ಕಡಬ ಹಾಗೂ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ 36 ಜನ ಗಡೀಪಾರಿನ ಪಟ್ಟಿಯಲ್ಲಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್​ಗೆ ರಿಲೀಫ್:
ಮೇ 12ರಂದು ಆರ್​ಎಸ್​​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳದ ಗ್ರಾಮಾಂತರ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಭಾಕರ ಭಟ್​ಗೆ ರಿಲೀಫ್ ಸಿಕ್ಕಿದೆ. ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ನೀಡಿದೆ.