ಉಡುಪಿ: ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ (ಮಿಷನ್)ಯ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕ ಉದ್ಘಾಟನೆ

ಉಡುಪಿ: ಇಂದು ಮಹಿಳೆಯರಲ್ಲಿ ಬೇರೆ ಎಲ್ಲ ಕ್ಯಾನ್ಸರ್‌ಗಿಂತ ಸ್ತನ ಕ್ಯಾನ್ಸರ್‌ಗಳೇ ಹೆಚ್ಚಾಗಿ ಕಂಡುಬರುತ್ತಿದೆ. ಹಾಗಾಗಿ ಮಹಿಳೆಯರು ಇದರ ಬಗ್ಗೆ ನಿರ್ಲಕ್ಷ್ಯ ಮಾಡದೇ ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ತಪಾಸಣೆಗೆ ಒಳಪಡಿಸಿಕೊಳ್ಳಬೇಕು ಎಂದು ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಹೇಳಿದರು‌.

ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ (ಮಿಷನ್ ಆಸ್ಪತ್ರೆ)ಯಲ್ಲಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕದ (ಮ್ಯಾಮೋಗ್ರಫಿ ಯುನಿಟ್) ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೇಂದ್ರವನ್ನು ನಾವು ಆರಂಭಿಸಿರುವುದು ಯಾವುದೇ ಲಾಭ ಗಳಿಸಲು ಅಲ್ಲ. ಬದಲಾಗಿ ಜನರಿಗೆ ಸೇವೆ ನೀಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು‌.

ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಸ್ತನ ಕ್ಯಾನ್ಸರ್‌ಗೆ ತುತ್ತಾದರೆ, 8 ನಿಮಿಷಕ್ಕೆ ಒಬ್ಬರು ಸಾಯುತ್ತಿದ್ದಾರೆ. ವರ್ಷದಲ್ಲಿ ಒಂದು ಲಕ್ಷ ಜನ ಇದಕ್ಕೆ ಬಲಿಯಾಗುತ್ತಿದ್ದಾರೆ. ಈಗ ಶೇ.50ರಷ್ಟು 50ವರ್ಷದೊಳಗಿನವರಲ್ಲಿ ಈ ಕ್ಯಾನ್ಸರ್ ಕಂಡು ಬರುತ್ತಿದೆ. ಇದರ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದೆ ಇರುವುದರಿಂದ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷೆ ದುಬಾರಿಯಾಗಿದೆ. ಆದರೆ ನಾವು ಇಲ್ಲಿ ಎಲ್ಲರಿಗೂ ಅನುಕೂಲವಾಗುವ ದರದಲ್ಲಿ ಈ ಪರೀಕ್ಷೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು, ಮಿಷನ್ ಆಸ್ಪತ್ರೆ ಕಳೆದ 103 ವರ್ಷಗಳಿಂದ ನಿರಂತರವಾಗಿ ಈ ಭಾಗದ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವುದು ಹೆಮ್ಮೆ ವಿಷಯ. ಆಸ್ಪತ್ರೆಯ ಸ್ಥಾಪಕರ ಧ್ಯೇಯವನ್ನು ಈಗಲೂ ಮುಂದುವರೆಸಿಕೊಂಡು ನಿಷ್ಠೆಯಿಂದ ಶ್ರೇಷ್ಠ ಸೇವೆಯನ್ನು ಇಲ್ಲಿ ನೀಡಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಕಾಳಜಿಯಿಂದ ಆರಂಭಿಸಲಾದ ಈ ಆಸ್ಪತ್ರೆಯು ಇನ್ನಷ್ಟು 100ವರ್ಷಗಳ ಕಾಲ ಬೆಳೆಯಲಿ ಎಂದು ಹಾರೈಸಿದರು.

ಸಿಎಸ್‌ಐ ಕೆಎಸ್‌ಡಿಯ ಖಜಾಂಚಿ ರೆ.ಐವನ್ ಡಿಸೋನ್ಸ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಸಿಎಸ್‌ಐ ಕೆಎಸ್‌ಡಿಯ ವುಮೆನ್ಸ್ ಫೆಲೋಶಿಪ್ ಭಾರತಿ ಹೇಮಚಂದ್ರ, ಆಸ್ಪತ್ರೆಯ ಉಪ ನಿರ್ದೇಶಕಿ ಡಾ.ದೀಪಾ ರಾವ್ ಹಾಗೂ ಮೈಂಡ್ ಟ್ರೈನರ್, ಸಮಾಲೋಚಕಿ ತನುಜಾ ಮಾಬೆನ್ ಮಾತನಾಡಿದರು.

ಸಿಎಸ್‌ಐ ಕೆಎಸ್‌ಡಿಯ ಉಡುಪಿ ಏರಿಯಾ ಚೇಯರ್‌ಮೆನ್ ರೆ.ಕಿಶೋರ್ ಕುಮಾರ್ ಹಾಗೂ ಎಲ್‌ಎಂಎಚ್ ಚಾಪ್ಲೈನ್ ರೆ.ರೈಚಲ್ ಡಿಸಿಲ್ವ ಪ್ರಾರ್ಥನೆ ನೆರವೇರಿಸಿದರು. ಎಲ್‌ಎಂಎಚ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಸುಜಾ ಕರ್ಕಡ ಸ್ವಾಗತಿಸಿದರು. ನರ್ಸಿಂಗ್ ಅಧೀಕ್ಷಕಿ ಶೈವಲ್ಯ ದೇವಾಡಿಗ ವಂದಿಸಿದರು. ಎಚ್‌ಆರ್ ಮೆನೇಜರ್ ಲಿಯೋನ ಸ್ಟ್ರೇಲಿಟಾ ಕಾರ್ಯಕ್ರಮ ನಿರೂಪಿಸಿದರು.