ಉಡುಪಿ ಕೋವಿಡ್ ಆಸ್ಪತ್ರೆಯ ಮಹಾ ಎಡವಟ್ಟು: ಬೇರೆಯೊಬ್ಬರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಮನೆಯವರು.!

ಕುಂದಾಪುರ: ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹದ ಬದಲು ಯುವಕನೊಬ್ಬನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ ಘಟನೆ ಉಡುಪಿ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಇಂದು ನಡೆದಿದೆ.
ಆಸ್ಪತ್ರೆಯ ಎಡವಟ್ಟಿನಿಂದ ಈ ವಿಚಿತ್ರ ಘಟನೆ ನಡೆದಿದ್ದು, ಕುಂದಾಪುರದ ರುದ್ರಭೂಮಿಯಲ್ಲಿ ಮೃತದೇಹ ಅದಲು ಬದಲಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಕೋಟೇಶ್ವರ ಸಮೀಪದ ನೇರಂಬಳ್ಳಿಯ 60 ವರ್ಷ ಪ್ರಾಯದ ವ್ಯಕ್ತಿ ಜು.30ರಂದು ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಇಂದು ಬೆಳಗ್ಗೆ ಮೃತಪಟ್ಟಿದ್ದರು.‌ ಕುಟುಂಬಸ್ಥರಿಗೆ ಕರೆ ಮಾಡಿದ ಆಸ್ಪತ್ರೆಯವರು, ನಾವೇ ಅಂತ್ಯಸಂಸ್ಕಾರ ಮಾಡುತ್ತೇವೆಂದು ಹೇಳಿದರು. ಆದರೆ ಇದಕ್ಕೆ ಮನೆಯವರು ಒಪ್ಪದಿದ್ದಾಗ ಅವರ ಒತ್ತಾಯದಂತೆ ಮೃತದೇಹವನ್ನು ಅಂತ್ಯಕ್ರಿಯೆ ನಡೆಸಲು ಕುಂದಾಪುರ ಸಂಗಮ್ ಸಮೀಪದ ಸ್ಮಶಾನಕ್ಕೆ ತರಲಾಗಿತ್ತು. ಐದು ಮಂದಿಗೆ ಪಿಪಿಇ ಕಿಟ್ ಧರಿಸಿಕೊಂಡು ಮೃತದೇಹ ವಿಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಆಗ ಮೃತದೇಹ ಅದಲು ಬದಲು ಆಗಿರುವುದು ಬೆಳಕಿಗೆ ಬಂದಿದ್ದು, 60 ವರ್ಷ ಪ್ರಾಯದ ವ್ಯಕ್ತಿಯ ಬದಲು ಯುವಕನ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ತಂದಿದ್ದರು.
ಆಸ್ಪತ್ರೆಯ ಬೇಜಾವಬ್ದಾರಿತನದ ವಿರುದ್ಧ ಮೃತರ ಮನೆಯವರು ಹಾಗೂ ಸ್ಥಳೀಯರು ಸ್ಮಶಾನದಲ್ಲಿಯೇ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ವಿಷಯದಲ್ಲಿ ಗೋಲ್ ಮಾಲ್ ಮಾಡುತ್ತಿದ್ದಾರೆ. ಆರೋಗ್ಯವಾಗಿದ್ದ ನಮ್ಮ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೊಂದು ಹಾಕಿದ್ದಾರೆ. ಈಗ ಬೇರೆಯೊಬ್ಬರ ಮೃತದೇಹ ತಂದು ಮೋಸ ಮಾಡುತ್ತಿದ್ದಾರೆ ಎಂದು ಮನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ನೇರಂಬಳ್ಳಿ ವ್ಯಕ್ತಿಯ ಮೃತದೇಹವನ್ನು ಸ್ಮಶಾನಕ್ಕೆ ತರಲಾಯಿತು. ಅಲ್ಲಿ ಮನೆಯವರ ಎದುರಿಗೆ ಮೃತದೇಹವನ್ನು ಪರೀಕ್ಷಿಸಿ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.