ಉಡುಪಿ ಮಾ.25: ಉಡಪಿ ಜಿಲ್ಲೆಯಲ್ಲಿ ಇವರೆಗೆ ಯಾವುದೇ ಕೊರೋನಾ ಸೊಂಕಿತರು ಪತ್ತೆಯಾಗಿಲ್ಲ. ಆದರೆ ವೈರಸ್ ಲಕ್ಷಣ ಹೊಂದುವ ಶಂಕಿತರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 25 ಮಂದಿ ಕೊರೋನಾ ಶಂಕಿತ ಲಕ್ಷಣ ಹೋಲುವ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ.
ಉಡುಪಿ ತಾಲೂಕಲ್ಲಿ 12 ಮಂದಿ, ಕುಂದಾಪುರದಲ್ಲಿ 6 ಮಂದಿ, ಕಾರ್ಕಳದಿಂದ 3 ಮಂದಿ, ಹಾಗೂ 4 ಮಂದಿ ಹೊರಜಿಲ್ಲೆಯವರಾಗಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾದ 25 ಮಂದಿಯಲ್ಲಿ 10 ಮಂದಿ ವಿದೇಶದಿಂದ ಭಾರತಕ್ಕೆ ಮರಳಿದವರಾಗಿದ್ದಾರೆ. ಹಾಗೂ ಇಬ್ಬರು ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದು, ಉಳಿದ 13 ಮಂದಿ ಜ್ವರ, ಶೀತ, ಕೆಮ್ಮು, ಎದೆನೋವು ಇತ್ಯಾದಿ ಲಕ್ಷಣ ಹೊಂದಿದವರಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 76 ಮಂದಿ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 51 ಮಂದಿಯ ವೈದ್ಯಕೀಯ ಪರೀಕ್ಷೆ ವರದಿಗಳು ಬಂದಿವೆ. 51ರಲ್ಲಿ ಎಲ್ಲವೂ ನೆಗೆಟಿವ್ ಆಗಿವೆ. ದಾಖಲಾದ 25 ಮಂದಿಯ ಗಂಟಲ ದ್ರವವನ್ನು ಶಿವಮೊಗ್ಗ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ವಿದೇಶದಿಂದ ಹಿಂದಿರುಗಿದ ಒಟ್ಟು 905 ಮಂದಿಯನ್ನು ಗುರುತಿಸಲಾಗಿದ್ದು, ಅವರೆಲ್ಲರಿಗೂ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ. ಅವರಲ್ಲಿ 285 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ.