ಕೊರೊನಾ ವೈರಸ್ : ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಗೆ ಹೆಚ್ಚಿನ ದರ ನಿಗಧಿಪಡಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ

ಉಡುಪಿ ಮಾ.18: ಜಿಲ್ಲೆಯಲ್ಲಿನ ಸಾರ್ವಜನಿಕರು (ಕೋವಿಡ್-19) ಕೊರೊನಾ ವೈರಸ್ ಭೀತಿಯಲ್ಲಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಲವಾರು ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ನಂತಹ ಉಪಯುಕ್ತ ವಸ್ತುಗಳನ್ನು ಬಳಸಲಾಗುತ್ತಿದೆ.
ಆದರೆ ಈ ಸಂದರ್ಭವನ್ನು ಔಷಧಿ ಅಂಗಡಿ ಮಾಲಕರು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ದರಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಅಲ್ಲದೇ ಈ ವಸ್ತುಗಳನ್ನು ನಿಯಮಬಾಹಿರವಾಗಿ ದಾಸ್ತಾನು ಇರಿಸಿ ಕೃತಕ ಅಭಾವವನ್ನು ಸೃಷ್ಟಿಸಿ ಈ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಲಾಭ ಪಡೆಯಲು ಹವಣಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಔಷಧ ಅಂಗಡಿಗಳಲ್ಲಿ ಕೆಮ್ಮು, ಸೀನು ಇರುವ ಸಿಬ್ಬಂದಿಗಳು ಮಾಸ್ಕ್ ಧರಿಸದೇ ಗ್ರಾಹಕರಿಗೆ ಔಷಧಿ ಮಾರಾಟ ಮಾಡುತ್ತಿರುವುದಾಗಿ ದೂರುಗಳು ಬಂದಿರುತ್ತದೆ.
ಇದರಿಂದಾಗಿ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಹಿನ್ನೆಡೆಯಾಗುತ್ತಿದ್ದು, ಆದ್ದರಿಂದ ಈ ತೆರನಾದ ಯಾವುದೇ ಚಟುವಟಿಕೆ ನಡೆಸದಂತೆ ತಿಳುವಳಿಕೆ ನೀಡಿದೆ. ತಪ್ಪಿದಲ್ಲಿ ಕಠಿಣ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.
ತುರ್ತು ಸೇವೆಗೆ ಶುಲ್ಕ ರಹಿತ ಸಂಖ್ಯೆ: 1077, ದೂರವಾಣಿ ಸಂಖ್ಯೆ: 0820-2574802 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಡಿಸಿ ತಿಳಿಸಿದ್ದಾರೆ.