ಕೊರೋನಾ ವೈರಸ್ ಕುರಿತು ಎಲ್ಲಾ ಸಂಶಯ ನಿವಾರಣೆಗೆ ಸಹಾಯವಾಣಿ ಸಂಪರ್ಕಿಸಿ: ಡಾ. ಸುಧೀರ್ ಚಂದ್ರ ಸೂಡಾ

ಉಡುಪಿ ಮಾ.19: ಉಡುಪಿ ಜಿಲ್ಲೆಯಲ್ಲಿ ಕರೋನಾ ವೈರಸ್ ಕುರಿತು ನಾಗರೀಕರಲ್ಲಿರುವ ಸಂದೇಹಗಳನ್ನು ಪರಿಹರಿಸಲು, ರೋಗದ ಬಗ್ಗೆ ಮಾಹಿತಿ ನೀಡಲು, ಸಂಶಯಾಸ್ಪದ ರೋಗಿಗಳ ಚಲನಗಳ ಮಾಹಿತಿ ಸಂಗ್ರಹಿಸಲು, ಐಸೋಲೇಟೆಡ್ ಬೆಡ್‍ಗಳ ನಿರ್ವಹಣೆ ಕುರಿತಂತೆ ಸಮಗ್ರ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ತೆರೆಯಲಾಗಿದ್ದು, ಸಹಾಯವಾಣಿಯ ಸಂ. 9663957222 ಅಥವಾ 9663950222 ಆಗಿದ್ದು, ಒಂದೇ ದಿನದಲ್ಲಿ 20 ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದ್ದು, ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯದ ಸಾರ್ವಜನಿಕರೂ ಸಹ ಮಾಹಿತಿ ಕೋರಿ ಸಹಾಯವಾಣಿ ಸಂಪರ್ಕಿಸಿದ್ದಾರೆ.

ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಡಿಹೆಚ್ ಓ ಡಾ. ಸುಧೀರ್ ಚಂದ್ರ ಸೂಡಾ ಈ ಬಗ್ಗೆ ಮಾಹಿತಿ ನೀಡಿದರು.

ಈ ಸಹಾಯವಾಣಿ 24ಘ*7 ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲು ಒಟ್ಟು 13 ಸಿಬ್ಬಂದಿ ನಿಯೋಜಿಸಲಾಗಿದ್ದು, ಕರೋನಾ ಕುರಿತು ಸಂದೇಹ ಬಗೆಹರಿಸಲು ಕೌನ್ಸಿಲರ್ ಸಹ ಇದ್ದು, ಮಾಹಿತಿ ಸಂಗ್ರಹಣೆ, ವಿದೇಶಗಳಿಂದ ಬಂದವರು ಅನುಸರಿಸಬೇಕಾದ ಕ್ರಮಗಳು, ಹೋಂ ಕ್ವಾರಂಟೈನ್ ಕುರಿತು ಮಾಹಿತಿ, ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೆಂದ್ರಗಳ ನಡುವಿನ ಮಾಹಿತಿ ವಿನಿಮಯ, ಮತ್ತು ದಾಖಲೆಗಳ ಕ್ರೂಢೀಕರಣ ಮಾಡಲಾಗುತ್ತಿದೆ. ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ 8 ತಂಡಗಳನ್ನು ರಚಿಸಿದ್ದು, ತಾಲೂಕು ಹಂತದಲ್ಲಿಯೂ ಸಹ ತಂಡಗಳನ್ನು ರಚಿಸಲಾಗಿದೆ ಎಂದು ಡಿಹೆಚ್ ಓ ಡಾ. ಸುದೀರ್ ಚಂದ್ರ ಸೂಡಾ ಮಾಹಿತಿ ನೀಡಿದರು.

ಈ ಸಹಾಯವಾಣಿ ಕೇಂದ್ರದಲ್ಲಿ ಯಾವುದೇ ಕೊರೋನಾ ಶಂಕಿತ ರೋಗಿಯ ತಪಾಸಣೆ ನಡೆಸುವುದಿಲ್ಲ. ಆದ್ದರಿಂದ ಸಾರ್ವಜನಿಕರು ಈ ಸಹಾಯವಾಣಿ ಕೇಂದ್ರಕ್ಕೆ ಆಗಮಿಸದಂತೆ ತಿಳಿಸಿದ ಡಿಹೆಚ್‍ಓ, ಕೊರೋನಾ ಶಂಕಿತ ರೋಗಿಗಳು ಪರೀಕ್ಷೆಗಾಗಿ ಆರೋಗ್ಯ ಇಲಾಖೆಯ ಆಡಳಿತಾತ್ಮಕ ಕಚೇರಿಗೆ ಆಗಮಿಸದೆ, ಸಮೀಪದ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪರೀಕ್ಷಿಸಿಕೊಳ್ಳಬೇಕು, ಆಡಳಿತ ಕಚೇರಿಯಲ್ಲಿ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಉಪಕರಣಗಳು ಇರುವುದಿಲ್ಲ ಎಂದು ತಿಳಿಸಿದರು.

ಕೊರೋನಾ ಕುರಿತ ಮಾಹಿತಿಯನ್ನು ಜಿಲ್ಲಾಧಿಕಾರಿ ಮತ್ತು ಡಿ.ಹೆಚ್.ಓ ಮಾತ್ರ ನೀಡಲು ಸರಕಾರದ ಆದೇಶವಿರುವುದಿಂದ ಮಾಹಿತಿ ಕೋರಿ ಸಹಾಯವಾಣಿಯನ್ನು ಸಂಪರ್ಕಿಸದಂತೆ ಡಿಹೆಚ್‍ಓ ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೈಬರ್ ಕ್ರೈಂ ಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ ಡಿಹೆಚ್‍ಓ ಅಂತಹವರ ವಿರುದ್ಧ ಕೋವಿಡ್ 19- 2020 ನಿಯಂತ್ರಣ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲೆಯಿಂದ ವಿದೇಶಗಳಿಗೆ ತೆರಳುವವರು, ತಮಗೆ ಕೊರೋನಾ ಇಲ್ಲದ ಕುರಿತು ಪ್ರಮಾಣ ಪತ್ರ ನೀಡುವಂತೆ ಆಗಮಿಸುತ್ತಿದ್ದು, ಅಂತಹ ಯಾವುದೇ ಪ್ರಮಾಣಪತ್ರ ನೀಡಲು ಆದೇಶವಿಲ್ಲ ಹಾಗೂ ವಿದೇಶ ಪ್ರಯಾಣಕ್ಕೆ ಯಾವುದೇ ಅನುಮತಿ ಸಹ ನೀಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಿದೇಶ ಪ್ರಯಾಣವನ್ನು ಮುಂದೂಡುವುದು ಉತ್ತಮ ಎಂದು ಡಿಹೆಚ್‍ಓ ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಹಿರಿಯ ಆರೋಗ್ಯ ಮೇಲ್ವಿಚಾರಕ ಸತೀಶ್, ಜಿಲ್ಲಾ ಕೊರೋನಾ ನಿಯಂತ್ರಣ ಕಾರ್ಯಪಡೆಯ ಸದಸ್ಯರಾದ ಪ್ರೀತಮ್, ಗಿರೀಶ್ ಕಡ್ಡೀಪುಡಿ ಉಪಸ್ಥಿತರಿದ್ದರು.