ಕೊರೂನಾ ವೈರಸ್, ಸರಕಾರದ ನಿರ್ಭಂದಗಳನ್ನು ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ

ಉಡುಪಿ ಮಾ.14: ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ವಿಧಿಸಿರುವ ನಿರ್ಬಂಧಗಳನ್ನು, ಸಂಬಂದಪಟ್ಟ ಸಂಸ್ಥೆಗಳು ಮತ್ತು ಸಾರ್ವಜನಿಕರು ಜಿಲ್ಲೆಯಲ್ಲಿ ಕಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಮಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಗೆ ವಿದೇಶಗಳಿಂದ ಆಗಮಿಸುವವರು ರೋಗ ಲಕ್ಷಣ ಇಲ್ಲದಿದ್ದರೂ ಸಹ 14 ದಿನಗಳ ಕಾಲ ಮನೆಯಲ್ಲಿಯೇ ಇರುವಂತೆ ತಿಳಿಸಿದ ಅವರು, ಜಾತ್ರೆ ಮುಂತಾದ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನ ಮಾತ್ರ ನಡೆಸುವಂತೆ ಹಾಗೂ ಈಗಾಗಲೇ ನಿಶ್ಚಯವಾಗಿರುವ ಮದುವೆ , ನಿಶ್ವಿತಾರ್ಥ ಮುಂತಾದ ಸಮಾರಂಭಗಳನ್ನು ಹೆಚ್ಚು ಜನ ಸೇರಲು ಅವಕಾಶ ನೀಡದೇ , ಹತ್ತಿರದ ಸಂಬಂದಿಗಳೊಂದಿಗೆ ಮಾತ್ರ ಆಚರಿಸುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ ಈಗಾಗಲೇ ಕಾರ್ಯಾಗಾರ ನಡೆಸಿ ಸ್ಪಷ್ಠ ಸೂಚನೆಗಳನ್ನು ನೀಡಿದ್ದು,ಕೊರೋನಾ ರೋಗ ಲಕ್ಷಣ ಇರುವ ರೋಗಿಗಳನ್ನು ನಿರ್ಲಕ್ಷಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಪ್ರತಿ ಆಸ್ಪತ್ರೆಯಲ್ಲಿ 2 ಐಸೋಲೇಟೆಡ್ ಕೊಠಡಿ ಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ ಎಂದರು.

ಸೋಶಿಯಲ್ ಮೀಡಿಯಾಗಳ ಮೂಲಕ ಜಿಲ್ಲೆಯಲ್ಲಿ ಕರೋನಾ ಕುರಿತಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ದ ಕಾಯ್ದೆಯಲ್ಲಿ ಸೂಚಿಸಿರುವಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಇಂದು ಒಬ್ಬರು ಕೊರೋನಾ  ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದು ಸೇರಿದಂತೆ,  ಒಟ್ಟು 3 ಮಂದಿ ಕೊರೋನಾ ಶಂಕಿತರು ದಾಖಲಾಗಿದ್ದು, ಅವರ ವೈದ್ಯಕೀಯ ವರದಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ , ಇದುವರೆಗೆ ಜಿಲ್ಲೆಯಿಂದ ಕಳುಹಿಸಿದ ಎಲ್ಲಾ ವರದಿಗಳು ನೆಗೆಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಡಿ.ಹೆಚ್.ಓ ಡಾ.ಸುಧೀರ್ ಚಂದ್ರ ಸೂಡಾ ಉಪಸ್ಥಿತರಿದ್ದರು.