ಉಡುಪಿ: ಪತಿ ಕೋವಿಡ್ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ವಿಷಯ ತಿಳಿದು ಮನನೊಂದ ಕೊರೊನಾ ಸೋಂಕಿತ ಪತ್ನಿ ವಸತಿ ಸಮುಚ್ಚಯವೊಂದರ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಉಡುಪಿ ನಗರದಲ್ಲಿ ಸಂಭವಿಸಿದೆ.
ಮೃತರನ್ನು ಉಡುಪಿ ಜೋಡುಕಟ್ಟೆಯ ಜನಾರ್ಧನ್ ಟವರ್ನ ನಿವಾಸಿ ಗಂಗಮ್ಮ (70) ಎಂದು ಗುರುತಿಸಲಾಗಿದೆ. ಇವರ ಪತಿ ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಮನನೊಂದು ಗಂಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇವರು ಮೂಲತಃ ಚಿತ್ರದುರ್ಗಾ ಮೂಲದ ನಿವಾಸಿಯಾಗಿದ್ದು, ಕಳೆದ ಕೆಲವು ತಿಂಗಳಿನಿಂದ ಉಡುಪಿಯಲ್ಲಿ ನೆಲೆಸಿದ್ದಾರೆ. ಇವರ ಪುತ್ರ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವಪರೀಕ್ಷೆಗೆ ಶವ ಸಾಗಿಸಲು ಪೊಲೀಸ್ ಇಲಾಖೆಗೆ ಸಹಕರಿಸಿದರು.