ಉಡುಪಿ ಮಾ.26: ಜಿಲ್ಲೆಯಾದ್ಯಂತ ತರಕಾರಿ, ದಿನಸಿ, ಮೀನು, ಮಾಂಸ , ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲು ಮುಂತಾದವುಗಳನ್ನು ಮಾರಾಟ ಮಾಡುವ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಎದುರಿನಲ್ಲಿ ಕನಿಷ್ಠ 6 ಅಡಿಗಳ ಅಂತರದಲ್ಲಿ ಕಡ್ಡಾಯವಾಗಿ ಪೇಂಟ್ ಅಥವಾ ಇನ್ನಿತರ ಬಣ್ಣದ ವಸ್ತುಗಳಿಂದ ಗುರುತನ್ನು ಹಾಕುವುದು ಹಾಗೂ ಸಾರ್ವಜನಿಕರು/ಗ್ರಾಹಕರು ಗುರುತುಗಳ ಸರತಿ ಸಾಲಿನಲ್ಲಿ ನಿಂತು ವಸ್ತುಗಳನ್ನು ಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಈ ನಿರ್ದೇಶನಗಳನ್ನು ಪಾಲಿಸದ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಅಲ್ಲದೇ ಯಾವುದೇ ಅಗತ್ಯ ವಸ್ತುಗಳನ್ನು ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡತಕ್ಕದ್ದಲ್ಲ, ಕೃತಕ ಅಭಾವ ಸೃಷ್ಠಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡಲು , ಅನಾವಶ್ಯಕವಾಗಿ ಸಂಗ್ರಹಾಲಯಗಳಲ್ಲಿ ಇಂತಹ ವಸ್ತುಗಳನ್ನು ದಾಸ್ತಾನು ಮಾಡತಕ್ಕದ್ದಲ್ಲ, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಮೇಲಿನ ನಿರ್ದೇಶನಗಳು ಪಾಲನೆಯಾಗುವಂತೆ ಸಂಬಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು,ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ ಗಳು ಕ್ರಮವಹಿಸಬೇಕು ತಪ್ಪದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.












