ಉಡುಪಿ ಮಾ.21: ಕೋವಿಡ್ -19 ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ಕ್ಲಬ್‍ಗಳು ಹಾಗೂ ನೈಟ್‍ಕ್ಲಬ್‍ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ನಿರ್ದೇಶಿಸಲಾಗಿದ್ದು, ಮುಂದುವರೆದು ಇನ್ನೂ ಅನೇಕ ಜನಸಂದಣಿ ಇರುವ ಸ್ಥಳಗಳಲ್ಲಿ, ಹೆಚ್ಚು ಗ್ರಾಹಕರು ಸೇರುವಂತಹ ವಾಣಿಜ್ಯ ಮಳಿಗೆಗಳಲ್ಲಿ ಜನ ಸಂದಣಿಯನ್ನು ನಿಯಂತ್ರಿಸುವ ಅತೀವ ಅವಶ್ಯಕತೆ ಕಂಡು ಬರುತ್ತಿದೆ.
ವೈರಾಣುಗಳು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕೆಲವೊಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅತಿ ಅವಶ್ಯಕವಾಗಿರುವ ಹಿನ್ನಲೆಯಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಮಾರ್ಚ್ 20 ರಿಂದ ಮುಂದಿನ ಆದೇಶದವೆರೆಗೆ ಈ ಕೆಳಕಂಡ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.
ಕೆಲವೊಂದು ಬಟ್ಟೆ ಅಂಗಡಿಗಳು, ಚಿನ್ನಾಭರಣ ಮಳಿಗೆಗಳು ಮತ್ತು ಎಲೆಕ್ಟ್ರಾನಿಕ್ ಮಳಿಗೆಗಳು, ಮತ್ತಿತರ ಮಳಿಗೆಗಳು, ಬಹುಮಹಡಿ ಕೇಂದ್ರೀಕೃತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತಹ ವಾತಾವರಣವು ಕೊರೊನಾ ವೈರಸ್ ಹರಡುವಿಕೆಗೆ ಪೂರಕವಾಗುವ ಸಂಭವವಿದ್ದು, ಇಂತಹ ಮಳಿಗೆಗಳಲ್ಲಿ ಏಕಕಾಲದಲ್ಲಿ 25 ಸಿಬ್ಬಂದಿಗಳಿಗಿಂತ ಜಾಸ್ತಿ ಜನ ಕಾರ್ಯ ನಿರ್ವಹಿಸುವುದನ್ನು ಹಾಗೂ 50 ಜನಕ್ಕಿಂತ ಜಾಸ್ತಿ ಗ್ರಾಹಕರು ಸೇರುವುದನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಸದರಿ ಮಳಿಗೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು 25 ಕ್ಕೆ ಸೀಮಿತಗೊಳಿಸಿದಾಗ, ಉಳಿದ ಕರ್ತವ್ಯ ರಹಿತ ಇತರೆ ಸಿಬ್ಬಂದಿಗಳ ವೇತನವನ್ನು ಸಂಬಂಧಿಸಿದ ಮಳಿಗೆಗಳ ಮಾಲಿಕರು ಪಾವತಿಸಬೇಕಾಗುತ್ತದೆ. ಮಳಿಗೆಗಳಿಗೆ ಆಗಮಿಸುವ ಗ್ರಾಹಕರಲ್ಲಿ ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಇರುವ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಮಳಿಗೆಗಳ ಮಾಲೀಕರು, ವ್ಯವಸ್ಥಾಪಕರು ಖಚಿತ ಪಡಿಸಿಕೊಳ್ಳಬೇಕು.
ಮಳಿಗೆಯನ್ನು ಪ್ರವೇಶಿಸುವ ಮುನ್ನಾ ಗ್ರಾಹಕರು ಸ್ಯಾನಿಟೈಸರ್ ಬಳಸಿ ಒಳ ಪ್ರವೇಶಿಸುವುದಕ್ಕೆ ಮಳಿಗೆ ಮಾಲಿಕರು, ವ್ಯವಸ್ಥಾಪಕರು ಏರ್ಪಾಡು ಮಾಡಿಕೊಳ್ಳಬೇಕು ಹಾಗೂ ಅದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಮಳಿಗೆ ವಠಾರದಲ್ಲಿ ಸ್ವಚ್ಚತೆ ಕಾಪಾಡುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.